ನವದೆಹಲಿ : ರೈತರ ಹೋರಾಟ ಬೆಂಬಲಿಸುವ ರೂಪುರೇಷೆಯಿದ್ದ ‘ಟೂಲ್ ಕಿಟ್’ ಪ್ರಕರಣದಲ್ಲಿ ಬಂಧಿತರಾಗಿದ್ದ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ತಲಾ 1 ಲಕ್ಷ ರೂ. ಮೌಲ್ಯದ ಎರಡು ಭದ್ರತೆಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ.
ದಿಶಾ ರವಿ ಅವರನ್ನು ಕಳೆದ ವಾರ ಬೆಂಗಳೂರಿನ ತಮ್ಮ ನಿವಾಸದಿಂದ ದೆಹಲಿ ಪೊಲೀಸರು ಬಂಧಿಸಿದ್ದರು. ಜ.26ರಂದು ದೆಹಲಿಯಲ್ಲಿ ನಡೆದ ರೈತರ ಹೋರಾಟಕ್ಕೆ ಸಂಬಂಧಿಸಿ ಖಲಿಸ್ತಾನಿ ಪರ ಸಂಘಟನೆ ಪೋಯೆಟಿಕ್ ಜಸ್ಟೀಸ್ ಫೌಂಡೇಶನ್ ಜೊತೆ ದಿಶಾ ರವಿ, ನಿಕಿತಾ ಜಾಕೊಬ್ ಮತ್ತು ಶಂತನು ಮುಲುಕ್ ಎಂಬವರು ಸೇರಿಕೊಂಡು ‘ಟೂಲ್ ಕಿಟ್’ ರಚಿಸಿದ್ದರು ಎಂದು ಆಪಾದಿಸಲಾಗಿತ್ತು.
ಜ.26ರ ಹಿಂಸಾಚಾರಕ್ಕೂ ದಿಶಾ ರವಿಗೂ ಸಂಬಂಧವಿರುವ ಬಗ್ಗೆ ಯಾವ ಸಾಕ್ಷಿಯಿದೆ? ಎಂದು ಕೋರ್ಟ್ ಪ್ರಶ್ನಿಸಿತ್ತು. ದಿಶಾ ರವಿ ಬಂಧನದ ಬಗ್ಗೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ರೈತರ ಹೋರಾಟ ಬೆಂಬಲಿಸಿದ್ದ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಲ್ಲಿ, ಪರಿಸರವಾದಿ ಗ್ರೆಟಾ ಥನ್ಬರ್ಗ್ ಈ ಟೂಲ್ ಕಿಟ್ ಟ್ವೀಟ್ ಮಾಡಿದ್ದುದು ವಿವಾದದ ಮೂಲವಾಗಿತ್ತು.