ಕೊಳ್ಳೇಗಾಲ: ಸಮಾಜದಲ್ಲಿ ಘರ್ಷಣೆ, ಹಿಂಸೆಯನ್ನು ಸೃಷ್ಟಿಮಾಡುವುದು, ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದು ಅವರ ಕಾರ್ಯಸೂಚಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಡ್ಯದ ಕೆರೆಗೋಡಿನ ಕೇಸರಿ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಅಲ್ಲಿ ಅನುಮತಿ ಪಡೆದಿರುವ ಉದ್ದೇಶವೇ ಬೇರೆ. ಈಗ ಆಗುತ್ತಿರುವುದೇ ಬೇರೆ. ಧರ್ಮದ ವಿಚಾರ ಪ್ರಸ್ತಾಪಿಸಿ ದೇಶದ್ರೋಹಿ, ಧರ್ಮವಿರೋಧಿ, ಪಾಕಿಸ್ತಾನಕ್ಕೆ ಹೋಗಿ ಎಂದೆಲ್ಲ ಹೇಳಿಕೊಂಡು ಜನರನ್ನು ಕೆರಳಿಸುತ್ತಾ ಬಿಜೆಪಿ ಬಂದಿದೆ. ಮೊದಲಿನಿಂದಲೂ ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡಿಕೊಂಡು ಬರುತ್ತಿದೆ’ ಎಂದು ಟೀಕಿಸಿದರು. ‘ಜನರು ಇದನ್ನು ಅರ್ಥಮಾಡಿಕೊಳ್ಳಬೇಕು. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಇದನ್ನೇ ಮಾಡಿದ್ದಾರೆ. ಅಭಿವೃದ್ಧಿ ಮಾಡಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಹಿಜಾಬ್, ಕೇಸರಿ ಶಾಲು, ಟಿಪ್ಪು ಸುಲ್ತಾನ್ ವಿಚಾರಗಳನ್ನು ಹೇಳುತ್ತಾ ರಾಜಕಾರಣ ಮಾಡುತ್ತಾ ಬಂದಿದ್ದರು. ಜನರ ಭಾವನೆಗಳ ಮೇಲೆ ಮತ ತೆಗೆದುಕೊಳ್ಳಬೇಕು ಎಂಬುದು ಅವರ ಉದ್ದೇಶ. ಜನರು ಎಚ್ಚೆತ್ತುಕೊಳ್ಳಬೇಕು’ ಎಂದರು.