ಶೂಟರ್​ ಪ್ರೀತಿ ರಜಾಕ್​ಗೆ ಸೇನೆಯಲ್ಲಿ ಪ್ರಮೋಷನ್: ಸುಬೇದಾರ್ ಹುದ್ದೆಗೇರಿದ ಮೊದಲ ಮಹಿಳೆ

Prasthutha|

ನವದೆಹಲಿ: ಟ್ರ್ಯಾಪ್ ಶೂಟರ್​ ಪ್ರೀತಿ ರಜಾಕ್ ಬಡ್ತಿ ಪಡೆದು ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿದ್ದಾರೆ. ಇದರಿಂದಾಗಿ ಈ ಹುದ್ದೆಗೇರಿದ ಮೊದಲ ಮಹಿಳೆಯಾಗಿದ್ದಾರೆ.

- Advertisement -

ಪ್ರೀತಿ ರಜಾಕ್ ಚಾಂಪಿಯನ್ ಟ್ರ್ಯಾಪ್ ಶೂಟರ್ ಆಗಿದ್ದು, ಡಿಸೆಂಬರ್ 2022 ರಲ್ಲಿ ಮಿಲಿಟರಿ ಪೊಲೀಸ್ ಕಾರ್ಪ್ಸ್‌ನಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು. ಇದೀಗ ಮೊದಲ ಮಹಿಳಾ ಸುಬೇದಾರ್ ರ್ಯಾಂಕ್​​ ಪಡೆದಿರುವುದು ಭಾರತೀಯ ಸೇನೆಗೆ ಹಾಗೂ ದೇಶದ ಮಹಿಳೆಯರಿಗೆ ಇ ಹೆಮ್ಮೆಯ ಕ್ಷಣ ಎಂದು ಸೇನೆ ಹೇಳಿದೆ.

ಸುಬೇದಾರ್ ಪ್ರೀತಿ ರಜಾಕ್ ಈಗ ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿದ್ದಾರೆ. ಅವರ ಸಾಧನೆಯು ಮಹಿಳಾ ಶಕ್ತಿಯ ಅಸಾಮಾನ್ಯ ಪ್ರದರ್ಶನವಾಗಿದೆ ಎಂದು ಸೇನೆ ತಿಳಿಸಿದೆ ಎಂದು ವರದಿಯಾಗಿದೆ.

- Advertisement -

ಪ್ರೀತಿ ರಜಾಕ್ ಶೂಟಿಂಗ್ ವಿಭಾಗದಲ್ಲಿ ಹವಾಲ್ದಾರ್ ಆಗಿ ಸೈನ್ಯಕ್ಕೆ ಸೇರಿದ ಮೊದಲ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಟ್ರ್ಯಾಪ್ ಮಹಿಳಾ ತಂಡದ ಸ್ಪರ್ಧೆಯಲ್ಲಿ ರಜಕ್ ಬೆಳ್ಳಿ ಪದಕ ಗೆದ್ದಿದ್ದರು. ಅಸಾಧಾರಣ ಪ್ರದರ್ಶನದ ಆಧಾರದ ಮೇಲೆ, ಅವರಿಗೆ ಸುಬೇದಾರ್ ಶ್ರೇಣಿಗೆ ಮೊದಲ ಔಟ್-ಆಫ್-ಟರ್ನ್ ಬಡ್ತಿಯನ್ನು ನೀಡಲಾಗಿದೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರೀತಿ ರಜಾಕ್ ಪ್ರಸ್ತುತ ಆರನೇ ಶ್ರೇಯಾಂಕವನ್ನು ಹೊಂದಿದ್ದಾರೆ (ಟ್ರ್ಯಾಪ್ ವುಮೆನ್ಸ್ ಈವೆಂಟ್) ಮತ್ತು ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ 2024 ಕ್ಕೆ ತಯಾರಿ ನಡೆಸಲು ಆರ್ಮಿ ಮಾರ್ಕ್ಸ್‌ಮನ್‌ಶಿಪ್ ಯುನಿಟ್ (ಎಎಂಯು) ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಕೆಯ ಮಹಾನ್ ಸಾಧನೆ ದೇಶದ ಯುವ ಪೀಳಿಗೆಗೆ ಭಾರತೀಯ ಸೇನೆಗೆ ಸೇರಲು ಮುಂದೆ ಬರಲು ಮತ್ತು ವೃತ್ತಿಪರ ಶೂಟಿಂಗ್‌ನಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಪ್ರೇರೇಪಿಸುತ್ತದೆ ಎಂದೂ ಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರೀತಿ ರಜಾಕ್ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಇಟಾರ್ಸಿಯಲ್ಲಿ ಕೆಳಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಆಕೆಯ ತಾಯಿ ಜ್ಯೋತ್ಸ್ನಾ ರಜಾಕ್ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಆಕೆಯ ತಂದೆ ಇಟಾರ್ಸಿಯಲ್ಲಿ ಡ್ರೈ ಕ್ಲೀನಿಂಗ್ ಅಂಗಡಿಯನ್ನು ನಡೆಸುತ್ತಿದ್ದಾರೆ. ತಂದೆ ಆಕೆಯ ಕ್ರೀಡೆಯಲ್ಲಿ ಆಸಕ್ತಿ ವಹಿಸಿದರು ಮತ್ತು 2015 ರಲ್ಲಿ ಮಧ್ಯಪ್ರದೇಶ ಶೂಟಿಂಗ್ ಅಕಾಡೆಮಿಗೆ ಸೇರಿಸಿದರು.



Join Whatsapp