ಮಂಡ್ಯ: ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ RSS ಕಚೇರಿ ಉದ್ಘಾಟನೆಗೊಂಡಿದೆ. ಈ ಸಮಾರಂಭದಲ್ಲಿ ಕಾಂಗ್ರೆಸ್ ಬೆಂಬಲಿತ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗವಹಿಸುವ ಮೂಲಕ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನವೇ ಪಾಂಡವಪುರದಲ್ಲಿ ಆರ್ಎಸ್ಎಸ್ ಕಚೇರಿ ಉದ್ಘಾಟನೆ ಮಾಡಿದ್ದು ಖುಷಿಯ ವಿಷಯ. ಸಮಾರಂಭದಲ್ಲಿ ಮುಖಂಡರ ಮಾತು ಕೇಳಿ ರಾಮನದ್ದು ಜಾತ್ಯತೀತ ವ್ಯಕ್ತಿತ್ವ ಎಂದು ಅರ್ಥವಾಗಿದೆ ಎಂದು ಹೇಳಿದ್ದಾರೆ.
ಮಂಡ್ಯದ ಪಾಂಡವಪುರದಲ್ಲಿ ನೂತನವಾಗಿ RSS ಕಚೇರಿ ಆರಂಭಿಸಲಾಗಿದ್ದು, ನೂತನ ಕಚೇರಿ ಉದ್ಘಾಟನೆಗೆ ಬಿಜೆಪಿ, ಜೆಡಿಎಸ್, ರೈತಸಂಘದ ನಾಯಕರು ಪಕ್ಷಾತೀತವಾಗಿ ಪಾಲ್ಗೊಂಡಿದ್ದಾರೆ. ಕಚೇರಿ ಉದ್ಘಾಟನೆಯಲ್ಲಿ ಮಾಜಿ ಸಚಿವ ಪುಟ್ಟರಾಜು ಅವರು ದಂಪತಿ ಸಮೇತ ಭಾಗವಹಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದೆ.”ನಿಮಗೆ ಆರೆಸ್ಸೆಸ್ ಎಂದರೆ ಏನು ಎಂದು ನಿಮ್ಮ ತಂದೆಯವರ ಒಂದಷ್ಟು ಭಾಷಣಗಳನ್ನು ಕೇಳಿದ್ದರೇ ಸ್ವಲ್ಪವಾದರೂ ಜ್ಞಾನ ಬರುತ್ತಿತ್ತು” ಎಂದು ಒಬ್ಬರು ಟೀಕಿಸಿದ್ದಾರೆ.