ನವದೆಹಲಿ: : ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೊ ಸಂಬಂಧವಾಗಿ ಆಂಧ್ರ ಪ್ರದೇಶದ 24 ವರ್ಷದ ಬಿ.ಟೆಕ್ ಪದವೀಧರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗುಂಟೂರಿನ ಈಮನಿ ನವೀನ್ ಎಂಬಾತ ಬಂಧಿತ ವ್ಯಕ್ತಿ. ಆರೋಪಿ ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದು, ನಟಿ ರಶ್ಮಿಕಾ ಅವರ ಫ್ಯಾನ್ಪೇಜ್ನ ಫಾಲೋವರ್ಗಳ ಸಂಖ್ಯೆ ಹೆಚ್ಚಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ನವೀನ್, ನಟಿ ರಶ್ಮಿಕಾ ಅವರ ದೊಡ್ಡ ಅಭಿಮಾನಿ. ಈತ ಮೂವರು ಸೆಲೆಬ್ರಿಟಿಗಳ ಫ್ಯಾನ್ಪೇಜ್ಗಳನ್ನು ನಡೆಸುತ್ತಿದ್ದಾನೆ. ಡೀಪ್ಫೇಕ್ ವಿಡಿಯೊ ಅಪ್ಲೋಡ್ ಮಾಡುವುದಕ್ಕೂ ಮುನ್ನ ಈತ ಮೂಲ ವಿಡಿಯೊಗಳನ್ನೇ ಅಪ್ಲೋಡ್ ಮಾಡಿದ್ದಾನೆ’ ಎಂದು ದೆಹಲಿಯ ಡಿಸಿಪಿ (ವಿಶೇಷ ಘಟಕ-ಗುಪ್ತಚರ) ಹೇಮಂತ್ ತಿವಾರಿ ಮಾಹಿತಿ ನೀಡಿದರು.
ತಾನು ನಡೆಸುತ್ತಿದ್ದ ಸೆಲೆಬ್ರಿಟಿಗಳ ಫ್ಯಾನ್ಪೇಜ್ಗಳ ಪೈಕಿ ಇಬ್ಬರು ನಟಿಯರದ್ದಕ್ಕೆ ಲಕ್ಷಕ್ಕೂ ಹೆಚ್ಚು ಫಾಲೋವರ್ಗಳಿದ್ದಾರೆ. ಆದರೆ, ರಶ್ಮಿಕಾ ಅವರ ಫಾಲೋವರ್ ಸಂಖ್ಯೆ 90 ಸಾವಿರ ಇತ್ತು. ಹೀಗಾಗಿ ರಶ್ಮಿಕಾ ಅವರ ಫ್ಯಾನ್ಪೇಜ್ನ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ಆತ ಈ ಕೃತ್ಯ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ.
ನಟಿಯ ಡೀಪ್ಫೇಕ್ ವಿಡಿಯೊ ಅನ್ನು ಈತ ಅಕ್ಟೋಬರ್ 13ರಂದು ಅಪ್ಲೋಡ್ ಮಾಡಿದ್ದ. ಆದಾದ ಎರಡು ವಾರಗಳಲ್ಲಿಯೇ ಈ ಫ್ಯಾನ್ಪೇಜ್ನ ಫಾಲೋವರ್ ಸಂಖ್ಯೆ 90 ಸಾವಿರದಿಂದ 1.08 ಲಕ್ಷಕ್ಕೆ ಏರಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಡೀಪ್ಫೇಕ್ ವಿಡಿಯೊ ಕುರಿತ ವಿವಾದ ರಾಷ್ಟ್ರಮಟ್ಟದಲ್ಲಿ ಧ್ವನಿಸಿ, ಪ್ರಸಿದ್ಧ ನಟರು, ಖ್ಯಾತನಾಮರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ವ್ಯಕ್ತಪಡಿಸಿದ ಬಳಿಕ ಆತಂಕಕ್ಕೆ ಒಳಗಾದ ಆರೋಪಿ ನವೀನ್, ತನ್ನ ಇನ್ಸ್ಟಾಗ್ರಾಮ್ ಚಾನೆಲ್ನ ಪೋಸ್ಟ್ಗಳನ್ನು ಅಳಿಸಿದ ಹಾಗೂ ಚಾನೆಲ್ ಹೆಸರನ್ನು ಬದಲಿಸಿದ. ಅಲ್ಲದೆ ತನ್ನ ಡಿವೈಸ್ನಲ್ಲಿದ್ದ ಡಿಜಿಟಲ್ ದತ್ತಾಂಶವನ್ನೂ ಅಳಿಸಿಹಾಕಿದ್ದಾನೆ ಎಂದು ಅವರು ವಿವರಿಸಿದರು.