ಉತ್ತರಿಸಬೇಕಾದವರು ಐಟಿ ಸೆಲ್‌ನರಲ್ಲ: ಮತ್ತೆ ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆಗೈದ ಸಿದ್ದರಾಮಯ್ಯ

Prasthutha|

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ನಿದ್ರಿಸುತ್ತಿರುವ ಫೋಟೋಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್‌ ಮಾಡಿದ್ದ ಆ ಬಳಿಕ ಬಿಜೆಪಿ ಕೂಡ ಸಿದ್ದರಾಮಯ್ಯ ಅವರನ್ನು ಎಡಿಟಿಂಗ್ ಮಾಸ್ಟರ್‍‌ ಎಂದು ಕರೆದಿತ್ತು. ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯ, ವೆಕ್ ಅಪ್‌ ಪಿಎಂ ಎಂಬ ಹ್ಯಾಷ್‌ ಟ್ಯಾಗ್‌‌ನೊಂದಿಗೆ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳು ಎಂದು ಹಲವು ಅಂಶಗಳನ್ನು X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

- Advertisement -

ಅಲ್ಲದೆ, ಕರ್ನಾಟಕ ಮತ್ತು ಕನ್ನಡಿಗರಿಗೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳನ್ನು ಹೇಳುತ್ತಲೇ ಬಂದಿದ್ದೇನೆ. ಇದಕ್ಕೆ ಉತ್ತರ ನೀಡಬೇಕಾಗಿರುವವರು ಪ್ರಧಾನಿ ನರೇಂದ್ರ ಮೋದಿಯವರೇ ಹೊರತು ಬಿಜೆಪಿಯ ಐಟಿ ಸೆಲ್ ಅಲ್ಲ ಎಂದು ಹೇಳಿದ್ದಾರೆ. ಸನ್ಮಾನ್ಯ ಪ್ರಧಾನಿಯವರು ಒಪ್ಪಿ ದಿನ ಮತ್ತು ಸ್ಥಳವನ್ನು ನಿಗದಿಪಡಿಸಿದರೆ ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಸವಾಲ್ ಕೂಡ ಹಾಕಿದ್ದಾರೆ.

1.ನಾಡಿಗೆ ಬರಗಾಲ ಬಂದು ಆರು ತಿಂಗಳುಗಳಾಗಿವೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ನಾನೇ ಖುದ್ದಾಗಿ ಹೋಗಿ ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ. ಇಲ್ಲಿಯವರೆಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ.

- Advertisement -

2.ಯುಪಿಎ ಸರ್ಕಾರದ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನಿಗದಿಪಡಿಸಿದ್ದ ಶೇ.4.72 ತೆರಿಗೆ ಪಾಲನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ 15ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಕೆ ಮಾಡಿ ವಂಚಿಸಲಾಗಿದೆ. ಇದರಿಂದ ಕನ್ನಡಿಗರು ಕಳೆದ 4 ವರ್ಷಗಳಲ್ಲಿ ಸುಮಾರು 45,000 ಕೋಟಿ ರೂಪಾಯಿಯಷ್ಟು ಬೆವರಗಳಿಕೆಯಿಂದ ಕಟ್ಟಿದ ತೆರಿಗೆ ಹಣವನ್ನು ಕಳೆದುಕೊಂಡಿದ್ದಾರೆ.

3.ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳಿಗೆ ನೀಡುತ್ತಿರುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸಲಾಗುತ್ತಿದೆ. 2021-22ರ ಅವಧಿಯಲ್ಲಿ 20 ಸಾವಿರ ಕೋಟಿ ರೂಪಾಯಿ ಇದ್ದ ಅನುದಾನ, 2022-23ರಲ್ಲಿ 13 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

4.ಕರ್ನಾಟಕಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಆದರೆ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಈ ಶಿಫಾರಸ್ಸನ್ನು ತಿರಸ್ಕರಿಸಿದ್ದಾರೆ. ಆರ್ಥಿಕ ವರ್ಷ ಆರಂಭವಾಗಿ 6 ತಿಂಗಳು ಕಳೆದರೂ ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಕೃಷ್ಣಾ ಮೇಲ್ದಂಡೆ ಮತ್ತು ಮಹದಾಯಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ.

5.ಏಮ್ಸ್ ಸಂಸ್ಥೆ ಬೇಕೆಂಬ ಕನ್ನಡಿಗರ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಕನ್ನಡಿಗರು ಶ್ರಮದಿಂದ ಕಟ್ಟಿದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ಬೇರೆ ರಾಜ್ಯಗಳ ನಷ್ಟದಲ್ಲಿರುವ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಬಗೆಯಲಾಯಿತು.

6.ನಮ್ಮ ಹಿರೀಕರು ಕಷ್ಟಪಟ್ಟು ನಿರ್ಮಾಣ ಮಾಡಿದ್ದ ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ಮಾರಲಾಯಿತು. ಹದಿನೆಂಟು ಸಾವಿರ ಕೋಟಿ ರೂಪಾಯಿ ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ಅನುದಾನ ಇಲ್ಲದೆ ಸೊರಗಿ ಹೋಗಿದೆ. ಇನ್ನು ರಾಜ್ಯದ ಇತರೆ ರೈಲ್ವೇ ಯೋಜನೆಗಳನ್ನು ಮೂಲೆಗೆ ತಳ‍್ಳಲಾಗಿದೆ.

ತೆರೆದ ಪುಸ್ತಕದಲ್ಲಿ ಕಾಣುವ ಈ ಅನ್ಯಾಯಗಳನ್ನು ಕಂಡು ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಯನ್ನು ಹೇಗೆ ವ್ಯಾಖ್ಯಾನಿಸಲಿ? ಉದ್ದೇಶಪೂರ್ವಕವಾದ ನಿರ್ಲಕ್ಷ್ಯ ಎನ್ನಲೇ? ಸಹಜವಾದ ನಿದ್ರಾ ಸ್ಥಿತಿ ಎನ್ನಲೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.



Join Whatsapp