ಜನವರಿ 19ರಿಂದ 3 ದಿನ ಮಂಗಳೂರು ಸಾಹಿತ್ಯ ಉತ್ಸವ

Prasthutha|

ಮಂಗಳೂರು: ಇದೇ 19, 20 ಮತ್ತು 21 ರಂದು ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ‘ಮಂಗಳೂರು ಸಾಹಿತ್ಯ ಉತ್ಸವ’ದ ಆರನೇ ಆವೃತ್ತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ್ ಫೌಂಡೇಷನ್‌ ತಿಳಿಸಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾರತ್‌ ಫೌಂಡೇಷನ್‌ನ ಟ್ರಸ್ಟಿ ಶ್ರೀರಾಜ್‌ ಗುಡಿ, ಈ ಸಾಹಿತ್ಯ ಉತ್ಸವದಲ್ಲಿ 29 ಗೋಷ್ಠಿಗಳು ನಡೆಯಲಿದ್ದು, 60 ಕ್ಕೂ ಅಧಿಕ ಸಾಹಿತಿಗಳು, ವಾಗ್ಮಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

19ನೇ ತಾರೀಕಿನಂದು ಸಂಜೆ 5 ಕ್ಕೆ ಸಾಹಿತ್ಯ ಉತ್ಸವ ಉದ್ಘಾಟನೆಯಾಗಲಿದೆ. ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಭರತ ನಾಟ್ಯ ಕಲಾವಿದೆ ರಾಧೆ ಜಗ್ಗಿ, ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆಯ ಸದಸ್ಯ ಕಾರ್ಯದರ್ಶಿ ಧನಂಜಯ ಸಿಂಗ್, ರಕ್ಷಣಾ ಸಚಿವರ ಸಲಹೆಗಾರ ಲೆ.ಜ.ವಿನೋದ ಖಂಡಾರೆ, ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್‌ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಗೆ 75 ವರ್ಷ, ದ.ರಾ.ಬೇಂದ್ರೆ ಅವರ ನಾಕು ತಂತಿ ಕೃತಿಗೆ 60 ವರ್ಷ ತುಂಬಿದ್ದು, ಈ ಕೃತಿಗಳ ಬಗ್ಗೆ ವಿಶೇಷ ಸಂವಾದಗಳನ್ನು ಏರ್ಪಡಿಸಲಾಗಿದೆ. ಪಂಜೆ ಮಂಗೇಶರಾಯರ 150 ನೇ ವರ್ಷಾಚರಣೆ ಅಂಗವಾಗಿ ‘ಚಿಣ್ಣರ ಅಂಗಳ’ ಎಂಬ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಳ ಸಮುದಾಯಗಳಿಂದ ಬಂದ ರಿಮ್‌ಜಿಮ್‌ ಗೌರ್‌, ಸಂಶೋಧಕಿ ಪ್ರೇರಣಾ ತಿರುವೈಪಟಿ ಹಾಗೂ ಆರ್ಷಿಯಾ ಮಲಿಕ್‌ ಅವರು ಭಾರತದ ಧ್ವನಿ- ಕುರಿತು ಸಂವಾದ ನಡೆಸಲಿದ್ದಾರೆ. ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ ನಡೆಸುವ ಹರಟೆ ಕಟ್ಟೆ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಫೌಂಡೇಷನ್‌ನ ಟ್ರಸ್ಟಿ ಸುನಿಲ್‌ ಕುಲಕರ್ಣಿ ಮಾತನಾಡಿ, ಉತ್ಸವದ ಅಂಗವಾಗಿ ನೀಡುವ ‘ದಿ ಐಡಿಯಾ ಆಫ್‌ ಭಾರತ್‌’ ಪ್ರಶಸ್ತಿಗೆ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಧಾರವಾಡದ ವನಿತಾ ಸೇವಾ ಸಮಾಜವನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಚಿಂತನೆ ಕುರಿತು ನಂದನ ಪ್ರಭು ಸಂಪಾದಕತ್ವದಲ್ಲಿ ಪ್ರಕಟಿಸಲಾದ ‘ದಿ ಐಡಿಯಾ ಆಫ್‌ ಭಾರತ್‌’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ಬಗ್ಗೆಯೂ ಸಂವಾದವಿದೆ’ ಎಂದು ಹೆಚ್ಚಿನ ಮಾಹಿತಿ ನೀಡಿದರು.

ಸಿನಿಮಾ ಪ್ರದರ್ಶನ, ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕೆ ಕಾರ್ಯಾಗಾರ, ಮಣ್ಣಿನ ಮಾದರಿ ತಯಾರಿ, ದೇಸಿ ಆಟಗಳು ಸಾಹಿತ್ಯ ಉತ್ಸವಕ್ಕೆ ವಿಶೇಷ ಮೆರುಗು ತರಲಿವೆ. ಕಾರ್ಯಕ್ರಮಗಳ ವಿವರಗಳಿಗೆ ಈ ಕೊಂಡಿಯನ್ನು (https://mlrlitfest.org/event-schedule-2024/) ನೋಡಬಹುದು ಎಂದು ಅವರು ತಿಳಿಸಿದರು.

ಫೌಂಡೇಷನ್‌ನ ಟ್ರಸ್ಟಿಗಳಾದ ಸುಜಿತ್‌ ಪ್ರತಾಪ್‌, ದಿಶಾ ಶೆಟ್ಟಿ, ಈಶ್ವರ್‌ ಪ್ರಸಾದ್‌, ದುರ್ಗಾರಾಮದಾಸ್‌ ಕಟೀಲ್‌ ಉಪಸ್ಥಿತರಿದ್ದರು.



Join Whatsapp