ಹೊಸದಿಲ್ಲಿ: ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯನ್ನು ಅಡ್ವಕೇಟ್ ಕಮಿಷನರ್ ಮೂಲಕ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು (ಜ.16) ತಡೆ ನೀಡಿದೆ.
ಶಾಹಿ ಈದ್ಗಾ ಆವರಣದ ಸಮೀಕ್ಷೆ ನಡೆಸಲು ನ್ಯಾಯಲಯದ ನಿಗಾದಲ್ಲಿರುವ ಅಡ್ವೋಕೇಟ್ ಕಮಿಷನರ್ ರನ್ನು ನೇಮಕಾ ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಗೆ ಮನವಿಯನ್ನು ಮಾಡಲಾಗಿತ್ತು. ಮನವಿಯ ಮೇರೆಗೆ ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಪರಿಶೀಲಿಸಲು ಆಯೋಗವನ್ನು ನೇಮಿಸಲು ಅಲಹಾಬಾದ್ ಹೈಕೋರ್ಟ್ ಆದೇಶವನ್ನು ನೀಡಿತ್ತು. ಅಲಹಾಬಾದ್ ಹೈಕೋರ್ಟ್ ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮುಸ್ಲಿಂ ಸಂಘಟನೆಗಳು ಅರ್ಜಿಯನ್ನು ಸಲ್ಲಿಸಿತ್ತು. ಇದೀಗ ಹೈಕೋರ್ಟ್ ನ ಈ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಸ್ಥಳೀಯ ಆಯುಕ್ತರ ನೇಮಕವನ್ನು ಕೋರಿ ಸಲ್ಲಿಸಲಾದ ಅರ್ಜಿಯು “ಅಸ್ಪಷ್ಟವಾಗಿದೆ” ಎಂದು ಸುಪ್ರೀಂ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ಪೀಠವು ಮೇಲಿನಂತೆ ಮಧ್ಯಂತರ ಆದೇಶ ಹೊರಡಿಸಿದೆ ಹಾಗೂ ಅಲಹಾಬಾದ್ ಹೈಕೋರ್ಟಿನ ಡಿಸೆಂಬರ್ 14ರ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದೆ.