ಬೆಂಗಳೂರು: ರಾಜ್ಯ ಸರ್ಕಾರದ ಯುವನಿಧಿ ಗ್ಯಾರೆಂಟಿ ಯೋಜನೆ ಬಗ್ಗೆ ಟೀಕಿಸಿರುವ ಮಾಜಿ ಸಚಿವ ಸಿ.ಟಿ. ರವಿ, ವಿದ್ಯುತ್ ಬೆಲೆ, ಅಬಕಾರಿ ತೆರಿಗೆ, ಸ್ಟಾಂಪ್ ತೆರಿಗೆ ಹೆಚ್ಚುಸಿರೋದು ಸೇರಿದಂತೆ ಮತ್ತಷ್ಟು ಗ್ಯಾರೆಂಟಿಗಳನ್ನು ಹೇಳದೆ ಸರ್ಕಾರ ನೀಡಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವನಿಧಿ ಗ್ಯಾರಂಟಿಗೆ ಚಾಲನೆ ವಿಚಾರವಾಗಿ ಸರ್ಕಾರ ದಿನಾ ಜಾಹೀರಾತು ಕೊಡುತ್ತಿದೆ. ಕಾಂಗ್ರೆಸ್ ನಾಯಕರು ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ, ಏಳು ತಿಂಗಳಾದ ನಂತರ ಐದನೆ ಗ್ಯಾರಂಟಿ ಇವತ್ತು ಚಾಲನೆ ಕೊಡುತ್ತಿದ್ದಾರೆ. ಆದರೆ ಅದು ಎಲ್ಲ ನಿರುದ್ಯೋಗಿಗಳಿಗೂ ಯುವನಿಧಿ ಗ್ಯಾರಂಟಿ ಕೊಡುತ್ತಿಲ್ಲ. ಯುವನಿಧಿ ಐದನೇ ಗ್ಯಾರಂಟಿಯನ್ನು ಈಗ ಕೊಡುತ್ತಿರುವ ಕಾಂಗ್ರೆಸ್ ಸರ್ಕಾರ, ಮತ್ತಷ್ಟು ಗ್ಯಾರಂಟಿಗಳನ್ನು ಹೇಳದೇ ಜಾರಿ ಮಾಡಿದೆ. ವಿದ್ಯುತ್ ಬೆಲೆ, ಅಬಕಾರಿ ತೆರಿಗೆ, ಸ್ಟಾಂಪ್ ತೆರಿಗೆ ಹೆಚ್ಚುಸಿರೋದು ಆರನೇ ಗ್ಯಾರಂಟಿಯಾದರೆ, ಹಳ್ಳಿಗಳಲ್ಲಿ ವಿದ್ಯುತ್ ಕಡಿತ ಮಾಡಿರುವುದು ಏಳನೇ ಗ್ಯಾರಂಟಿಯಾಗಿದೆ. ಇನ್ನೂ ಅಭಿವೃದ್ಧಿ ಕೆಲಸ ಸ್ಥಗಿತಗೊಳಿಸಿರುವುದು ಎಂಟನೇ ಗ್ಯಾರಂಟಿಯಾದರೆ, ಒಂಭತ್ತನೇ ಗ್ಯಾರಂಟಿ ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವುದಾಗಿದೆ. ಇದಲ್ಲದೇ ಹತ್ತು, ಹನ್ನೊಂದು, ಹನ್ನೆರಡು ಗ್ಯಾರಂಟಿಗಳ ಪಟ್ಟಿಯೂ ಸಹ ನಮ್ಮ ಬಳಿ ಇದೆ ಎಂದ ಅವರು, ಮಾಲೂರು ಶಾಸಕ ನಂಜೇಗೌಡ 30 ಲಕ್ಷ ರೂ.ಗೆ ಉದ್ಯೋಗ ಹರಾಜು ಹಾಕಿದ್ದು, ಇದು ಹತ್ತನೇ ಗ್ಯಾರಂಟಿಯಾಗಿದೆ. ವರ್ಗಾವಣೆಗೆ ದರ ಪಟ್ಟಿ ಹನ್ನೊಂದನೇ ಗ್ಯಾರಂಟಿಯಾಗಿದ್ದು, ಈ ಎಲ್ಲ ನೀವು ಹೇಳದೇ ಜಾರಿ ಮಾಡಿದ ಗ್ಯಾರಂಟಿಗಳಾಗಿದೆ. ಹೀಗಾಗಿ ಭ್ರಷ್ಟಾಚಾರದಲ್ಲಿ ನಾವು ನಂಬರ್ ಒನ್ ಅಂತ ಘೋಷಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.