ಈಕ್ವೇಡ್: ಲೈವ್ ನ್ಯೂಸ್ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಟುಡಿಯೋಗೆ ಬಂದೂಕುಧಾರಿ ದುಷ್ಕರ್ಮಿಗಳು ನುಗ್ಗಿ ದಾಳಿ ನಡೆಸಿದ ಮತ್ತು ಹದಿನೈದು ನಿಮಿಷ ದಾಳಿ ಲೈವ್ ಆಗಿ ಹೋದ ಘಟನೆ ಈಕ್ವೇಡರ್‌ನಲ್ಲಿ ನಡೆದಿದೆ.ಈಕ್ವೇಡರ್ನ ಟಿಸಿ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ.
ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ. ಆ್ಯಂಕರ್‌ನನ್ನು ಗುಂಡಿಕ್ಕುವುದಾಗಿ ಹಿಂಸಿಸಿದ್ದಾರೆ. ಆತ ಬೇಡಾ ನನ್ನನ್ನು ಕೊಲ್ಲಬೇಡಿ ಎಂದು ಗೋಗರೆದಿದ್ದು ಕೂಡ ಲೈವ್‌ನಲ್ಲಿ ಹೋಗಿದೆ.
ದಾಳಿಕೋರರು ನ್ಯೂಸ್ ಚಾನೆಲ್ ಸಿಬ್ಬಂದಿಯನ್ನು ಕಟ್ಟಿ ಹಾಕಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಇಡೀ ಘಟನೆಯು ಚಾನೆಲ್‌ನ ಲೈವ್‌ನಲ್ಲಿ ಪ್ರಸಾರವಾಗುತ್ತಿತ್ತು. 15 ನಿಮಿಷ ನ್ಯೂಸ್ ಲೈವ್ ಹೋಗಿದ್ದರಿಂದ ದುಷ್ಕರ್ಮಿಗಳ ದಾಳಿಯನ್ನು ಜನರು ಲೈವ್ ಆಗಿ ನೋಡಿದ್ದಾರೆ. ಚಾನೆಲ್‌ನ ಇಬ್ಬರು ಸಿಬ್ಬಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈಕ್ವೇಡರ್ ಅಧ್ಯಕ್ಷ ಡ್ಯಾನಿಯಲ್ ನೊಬೋವಾ ಅವರು ಮಿಲಿಟರಿ ಕಾರ್ಯಾಚರಣೆಗೆ ಆದೇಶ ಹೊರಡಿಸಿದ್ದಾರೆ. ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು ನೇರಪ್ರಸಾರದಲ್ಲೇ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗಲ್ಲಿಗೇರಿಸುವುದಾಗಿ ಅಲ್ಲಿನ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಸ್ಟುಡಿಯೋ ಒಳಗೆ ಗುಂಡಿನ ಮೊರೆತ ಮತ್ತು ಕೂಗಾಟವೂ ಕೇಳಿದೆ.
ದಾಳಿಕೋರರಲ್ಲಿ 13 ಜನರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.