ಪರ್ವೇಝ್ ಮುಷರಫ್‌‌ಗೆ ನೀಡಿದ್ದ ಗಲ್ಲು ಶಿಕ್ಷೆ ಎತ್ತಿ ಹಿಡಿದ ಪಾಕ್ ಸುಪ್ರೀಂ ಕೋರ್ಟ್!

Prasthutha|

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಹಾಗೂ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಝ್ ಮುಷರಫ್‌ ಅವರಿಗೆ ನೀಡಿದ್ದ ಗಲ್ಲು ಶಿಕ್ಷೆ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಆದರೆ ಕಳೆದ ವರ್ಷ ಪರ್ವೇಝ್ ಮುಷರಫ್ ನಿಧನಾಗಿದ್ದಾರೆ.

- Advertisement -

1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ರೂವಾರಿಯಾಗಿದ್ದ ಮುಷರಫ್‌, ಪಾಕಿಸ್ತಾನವನ್ನು ಆಳಿದ ಕೊನೆಯ ಸೇನಾ ನಾಯಕರಾಗಿದ್ದರು. ಕ್ರಿಮಿನಲ್ ಆರೋಪಗಳನ್ನು ತಪ್ಪಿಸಲು ಅವರು 2016 ರಿಂದ ಯುಎಇಯಲ್ಲಿ ಸ್ವಯಂ ಗಡಿಪಾರು ಆಗಿದ್ದರು. 2023ರ ಫೆಬ್ರವರಿ 5 ರಂದು ದೀರ್ಘಕಾಲದ ಅನಾರೋಗ್ಯದಿಂದಾಗಿ 79 ವರ್ಷದ ಮುಷರಫ್ ದುಬೈನಲ್ಲಿ ನಿಧನರಾಗಿದ್ದರು.

ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಖಾಜಿ ಫೇಜ್ ಇಸಾ ಅವರ ನೇತೃತ್ವದ ನ್ಯಾಯಮೂರ್ತಿ ಮನ್ಸೂರ್ ಅಲಿ ಶಾ, ನ್ಯಾಯಮೂರ್ತಿ ಅಮಿನುದ್ದೀನ್ ಖಾನ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರನ್ನೊಳಗೊಂಡ ನಾಲ್ಕು ಸದಸ್ಯರ ಪೀಠವು ಮುಷರಫ್ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿತ್ತು. 2019ರ ಡಿಸೆಂಬರ್ 17 ರಂದು, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಅಧಿಕಾರಾವಧಿಯಲ್ಲಿ ನವೆಂಬರ್ 2007 ರಲ್ಲಿ ದೇಶದ ಮೇಲೆ ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಲಾಗಿತ್ತು. ಆ ಬಳಿಕ ವಿಶೇಷ ನ್ಯಾಯಾಲಯ ಮಾಜಿ ಸೇನಾಧ್ಯಕ್ಷನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

- Advertisement -

ತನಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯ ವಿರುದ್ಧ ಮುಷರಫ್ ಸಲ್ಲಿಸಿದ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಕೊನೆಗೂ ಆ ತೀರ್ಪು ನೀಡಲಾಗಿದ್ದು, ಆದರೆ ಜೀವಂತವಾಗಿಲ್ಲದ ಪರ್ವೇಝ್ ಮುಷರಫ್‌ಗೆ ಗಲ್ಲು ಎತ್ತಿ ಹಿಡಿದು ಸುಪ್ರೀಂ ತೀರ್ಪು ನೀಡಿದಂತಾಗಿದೆ.



Join Whatsapp