ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಎರಡೂ ಸ್ಥಾನದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ವಿಜಯಪುರ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ನ ಮೆಹಜಬೀನ್ ಹೊರ್ತಿ ಆಯ್ಕೆಯಾಗಿದ್ದರೆ, ಉಪ ಮೇಯರ್ ಆಗಿ ಕಾಂಗ್ರೆಸ್ ನ ದಿನೇಶ್ ಹಳ್ಳಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಕಾಂಗ್ರೆಸ್ ವಿಜಯಪುರ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬಿಜೆಪಿಗೆ ಮುಖಭಂಗವಾಗಿದೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಿಜಯಪುರ ಪಾಲಿಕೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೆಜಬೀನ್ ಹೊರ್ತಿ ಒಟ್ಟು 22 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಎಸ್ ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 35 ಸ್ಥಾನಗಳ ಪೈಕಿ 17 ಬಿಜೆಪಿ, 10 ಕಾಂಗ್ರೆಸ್, 5 ಪಕ್ಷೇತರ, 2 ಎಐಎಂಐಎಂ,1 ಜೆಡಿಎಸ್ ಸದಸ್ಯರಿದ್ದರು.10 ಕಾಂಗ್ರೆಸ್ ಸದಸ್ಯರು, ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಥೋಡ್ ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿಯ 16 ಸದಸ್ಯರು ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿದ್ದರಿಂದ ಕಾಂಗ್ರೆಸ್ ಇತರ ಸದಸ್ಯರ ಬೆಂಬಲದೊಂದಿಗೆ ಗೆಲುವು ಕಂಡಿದೆ.