ಬೇಲೂರು: ತಾಲೂಕಿನ ಮತ್ತಾವರದಲ್ಲಿ ಗುರುವಾರ ಸಂಜೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆಗೆ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಾವರ ಗ್ರಾಮದ ವಸಂತ (43) ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ.
ಸಂಜೆಯ ವೇಳೆ ತೋಟದ ಮನೆಯಲ್ಲಿದ್ದ ವಸಂತ ಅವರ ಮೇಲೆ ಆನೆಯೊಂದು ದಾಳಿ ಮಾಡಿದ್ದು, ಸೊಂಡಿಲಿನಿಂದ ತಳ್ಳಿ, ತುಳಿದಿದೆ. ಇದರಿಂದ ವಸಂತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಿಕ್ಕೋಡು ಭಾಗದಲ್ಲಿ ಕಾಡಾನೆಗಳು ಹಿಂಡಾಗಿ ಓಡಾಡುತ್ತಿದ್ದು, ಅದರಲ್ಲಿನ ಒಂದು ಆನೆ ಮತ್ತಾವರದ ಬಳಿ ಬಂದು ದಾಳಿ ಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಆನೆ ದಾಳಿಗೆ ನಿರಂತರವಾಗಿ ಸಾವುಗಳು ಸಂಭವಿಸುತ್ತಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆನೆಗಳನ್ನು ಸ್ಥಳಾಂತರ ಮಾಡದೇ ಇದ್ದರೆ, ತಮ್ಮನ್ನೆಲ್ಲ ಜೆಸಿಬಿ ಮೂಲಕ ಗುಂಡಿ ತೋಡಿ ಮುಚ್ಚಿಬಿಡಿ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ಮತ್ತು ಗ್ರಾಮಸ್ಥರು ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.