ಬೆಂಗಳೂರು : ರಾಜ್ಯ ಸರಕಾರವು ಶಿವಾಜಿ ಮಹಾರಾಜರ ಜಯಂತಿ ಆಚರಿಸುತ್ತಿರುವುದನ್ನು ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಖಂಡಿಸಿದ್ದಾರೆ. ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ಮತ್ತು ಯಾವ ಕೊಡುಗೆಯೂ ನೀಡದ ಮಹಾರಾಷ್ಟ್ರದ ರಾಜನ ಜನ್ಮ ದಿನಾಚರಣೆ ಮಾಡಲಾಗುತ್ತಿದೆ. ಆದರೆ, ಕರ್ನಾಟಕದವರೇ ಆದ ಶ್ರೀ ಕೃಷ್ಣ ದೇವರಾಯ, ಇಮ್ಮಡಿ ಪುಲಿಕೇಶಿ ಅವರಂತಹ ಅರಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೌಜನ್ಯಕ್ಕೂ ನೆನೆಯುವುದಿಲ್ಲ ಎಂದು ದತ್ತಾ ಹೇಳಿದ್ದಾರೆ.
ಈ ಬಗ್ಗೆ ದತ್ತಾ ಅವರು ಇಂದು ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂಬ ಸಣ್ಣ ಕಲ್ಪನೆಯೂ ರಾಜ್ಯ ಸರಕಾರಕ್ಕೆ ಇಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
“ಕನ್ನಡ ರಾಜ್ಯದ ಮೇಲೆ ದಂಡೆತ್ತಿ ಬಂದು ಕನ್ನಡಿಗರನ್ನು ಕಾಡಿದ ಕಡೆಗೆ ಕನ್ನಡದ ವೀರ ವನಿತೆಯ ಬಳಿ ಆಶ್ರಯ ಪಡೆದಿದ್ದವನನ್ನು ರಾಜ್ಯ ಸರಕಾರ ಈ ರೀತಿ ಮೆರೆಸುತ್ತಿರುವುದು ಸಮಸ್ತ ಕನ್ನಡ ಕುಲಕೋಟಿಗೆ ಮಾಡುತ್ತಿರುವ ಅವಮಾನವೇ ಸರಿ ಎಂದು ದತ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಅರವಿಂದ ಲಿಂಬಾವಳಿ ಮುಂತಾದವರು ಭಾಗವಹಿಸಲಿದ್ದಾರೆ.