ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಮನುಸ್ಮೃತಿ ಪ್ರತಿಕೃತಿ ದಹಿಸಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ 1927ರ ಡಿ.25ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥ ಈ ಕಾರ್ಯಕ್ರಮ ನಡೆಸಲಾಗಿದೆ.ಇದಕ್ಕೂ ಮೊದಲು ಸಂಘಟನೆಯ ಮುಖಂಡರು, ಸದಸ್ಯರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದ ತನಕ ಮನುಸ್ಮೃತಿ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದ್ದಾರೆ. ‘ರಾಮನಾಮ ಝೂಟ್ ಹೈ, ಭೀಮನಾಮ ಸತ್ಯ ಹೈ’, ‘ಮನುಸ್ಮೃತಿ ಝೂಟ್ ಹೈ, ಸಂವಿಧಾನ ಸತ್ಯ ಹೈ’ ಎಂದು ಘೋಷಣೆ ಕೂಗಿದ್ದಾರೆ. ಅಣಕು ಶವಯಾತ್ರೆಗೆ ಮಹಿಳೆಯರು ಹೆಗಲುಕೊಟ್ಟಿದ್ದರು. ಮಹಿಳೆಯೇ ಅಗ್ನಿ ಸ್ಪರ್ಶ ಮಾಡಿದ್ದರು.ಜಗತ್ ವೃತ್ತದಲ್ಲಿ ಮನುಸ್ಮೃತಿ ಪ್ರತಿಕೃತಿಯನ್ನು ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ, ದೇಶದ ಜನರಿಗೆ ಅಸ್ಪೃಶ್ಯರೆಂಬ ಹಣೆಪಟ್ಟಿ ಕಟ್ಟಿ ಸಾವಿರಾರು ವರ್ಷಗಳಿಂದ ಪಶು-ಪಕ್ಷಿಗಳಿಗಿಂತಲೂ ಕೀಳಾಗಿ ನಡೆಸಿಕೊಂಡ ಮನುಸ್ಮೃತಿಯನ್ನು ದಹಿಸಿ ಡಾ.ಅಂಬೇಡ್ಕರ್ ಪ್ರತಿಭಟನೆ ದಾಖಲಿಸಿದ್ದರು. ಇದೀಗ ನಾವು ಮನುಸ್ಮೃತಿಯ ಪ್ರತಿಕೃತಿ ದಹಿಸುವ ಮೂಲಕ ಮನುಸ್ಮೃತಿಯನ್ನು ಪೋಷಿಸಿಕೊಂಡು ಬಂದ ಆರ್ಎಸ್ಎಸ್, ಬಜರಂಗದಳ, ವಿಶ್ವಹಿಂದೂ ಪರಿಷತ್, ಸಂಘ ಪರಿವಾರದ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದೇವೆ ಎಂದರು.