ಕಾರವಾರ: ತಾಕತ್ತು ಇದ್ರೆ ಹಿಂದೂ ರಾಷ್ಟ್ರವಾಗೋದನ್ನು ಸಿದ್ದರಾಮಯ್ಯ ತಡೆಯಲಿ ಎಂದು ಸಂಸದ ಅನಂತಕುಮಾರ ಹೆಗಡೆ ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಹುಚ್ಚು ಮಹಮದ್ ಸರ್ಕಾರ. ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಈ ದೇಶ ಹಿಂದು ರಾಷ್ಟ್ರವಾಗಲು ಬಿಡೊಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ. ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತ್ತಿದ್ದಾರೆ. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ ,ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ. ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದರೇ ಕಾಂಗ್ರೆಸ್ ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತೆ ಎಂಬುದನ್ನು ಯೋಚನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಇನ್ನು ಶಾಲೆಗೆ ಯಾರು ಬೇಕಾದ್ರು ಏನು ಬೇಕಾದ್ರು ಡ್ರೆಸ್ ಹಾಕಿಕೊಂಡು ಹೋಗಬಹುದು ಎಂಬ ಸಿದ್ದರಾಮಯ್ಯರ ಹೇಳಿಕೆಗೂ ಪ್ರತಿಕ್ರಿಯಿಸಿದ ಸಂಸದ, ಇವರ ಹೇಳಿಕೆ ಮುಂದಿನ ದಿನ ಆತಂಕಕಾರಿ ಬೆಳವಣಿಗೆಗೆ ಕಾರಣ ಆಗುತ್ತೆ. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗ್ತಾರೆ , ಅವರು ಹಿಜಾಬ್ ಹಾಕಿಕೊಂಡು ಹೋಗ್ತಾರೆ. ಸರ್ಕಾರಕ್ಕೆ ಒಂದು ಚೌಕಟ್ಟಿನ ಕಲ್ಪನೆ ಇಲ್ಲಾ ಎಂದಾದರೇ ಸರ್ಕಾರ ಇದೆ ಎಂದು ಅನಿಸುವುದಿಲ್ಲ. ಸಿದ್ದರಾಮಯ್ಯ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.