ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸುತ್ತಿರುವ ಮನೆಗಳ ಪೈಕಿ ಮುಕ್ತಾಯ ಹಂತದಲ್ಲಿರುವ 48,796 ಮನೆಗಳ ಪ್ರತಿ ಫಲಾನುಭವಿಗಳಿಂದ 1 ಲಕ್ಷ ರೂ. ಮಾತ್ರ ಸಂಗ್ರಹಿಸಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಂಪುಟ ತೀರ್ಮಾನಿಸಿದೆ.
ಗುರುವಾರ ನಡೆದ ಮಹತ್ವದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಝಮೀರ್ ಅಹ್ಮದ್ ಖಾನ್, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಿ ಮನೆಯನ್ನು ಪಡೆಯಬಹುದು. ಇದು ಕಾಂಗ್ರೆಸ್ ಚುನಾವಣೆಗೆ ಮುನ್ನ ಘೋಷಿಸದೇ ಇರುವ ಆರನೇ ಗ್ಯಾರಂಟಿ ಎಂದು ಪರಿಗಣಿಸಬಹುದು ಎಂದು ಹೇಳಿದರು.
2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿ ವರ್ಷವೂ ಒಂದಷ್ಟು ಮನೆಗಳಿಗೆ ಮಂಜೂರಾತಿ ನೀಡಲಾಗಿತ್ತು. 2018ರಿಂದ ಒಂದೇ ಒಂದು ಮನೆಯನ್ನು ಮಂಜೂರಾತಿ ನೀಡಲಾಗಿಲ್ಲ.