ಗಾಝಾ: ಇಸ್ರೇಲ್- ಗಾಝಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಒತ್ತೆಯಾಳುಗಳ ಬಿಡುಗಡೆ ಸಂಬಂಧವಾಗಿ ಹಮಾಸ್ ಜೊತೆ ಈಜಿಪ್ಟ್ ಮಾತುಕತೆ ನಡೆಸಿದ್ದು, ಯಾವುದೇ ಫಲಿತಾಂಶ ಉಂಟುಮಾಡುವಲ್ಲಿ ವಿಫಲವಾಗಿದೆ. ಗಾಝಾದಲ್ಲಿ ಇಸ್ರೇಲ್ ಆಕ್ರಮಣವನ್ನು ಸಂಪೂರ್ಣವಾಗಿ ನಿಲ್ಲಿಸುವುದಲ್ಲದ ಯಾವುದೇ ಒಪ್ಪಂದದ ಬಗ್ಗೆ ತಾನು ಚರ್ಚೆಗೆ ಸಿದ್ಧವಿಲ್ಲವೆಂದು ಹಮಾಸ್ ಹೇಳಿದೆ.
ಈಜಿಪ್ಟ್ ನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಒಂದು ತಿಂಗಳಿಗೂ ಅಧಿಕ ಸಮಯದ ಬಳಿಕ ಇದೇ ಮೊದಲ ಬಾರಿಗೆ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯೆಹ್ ಈಜಿಪ್ಟ್ ಗೆ ಭೇಟಿ ನೀಡಿದ್ದರು.
ಗಾಝಾದಲ್ಲಿ ಹಮಾಸ್‌ನ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಾಗೂ ಅದಕ್ಕೆ ಪ್ರತಿಯಾಗಿ ಇಸ್ರೇಲ್ ಬಂಧನದಲ್ಲಿರುವ ಪ್ಯಾಲೆಸ್ತೀನಿ ಕೈದಿಗಳನ್ನು ಬಂಧಮುಕ್ತಗೊಳಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಮೊದಲಿಗೆ ಗಾಝಾದ ಮೇಲಿನ ಸೇನಾ ಆಕ್ರಮಣವನ್ನು ಇಸ್ರೇಲ್ ನಿಲ್ಲಿಸಬೇಕು ಎಂದು ಹಮಾಸ್ ಪಟ್ಟು ಹಿಡಿದಿರುವುದರಿಂದ ಮಾತುಕತೆ ಫಲಪ್ರದವಾಗಲಿಲ್ಲವೆಂದು ಪ್ಯಾಲೆಸ್ತೀನ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.