ಮಂಗಳೂರು: ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸದ್ಯಕ್ಕೆ ನಿರ್ಬಂಧ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಕೆಲಸವನ್ನು ವಿಶೇಷ ಆದ್ಯತೆಯಲ್ಲಿ ನಡೆಸಲಾಗುವುದು. ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ಸ್ವರ್ಗ, ಸುಳ್ಯಪದವು, ಸುಳ್ಯದ ಜಾಲ್ಸೂರು ಚೆಕ್‌ಪೋಸ್ಟ್ ಗಳಲ್ಲಿ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಜಾಗೃತಿ ಬಗ್ಗೆ ಪ್ರಚಾರ ಮಾಡಲು ಕ್ರಮ ಕೈಗೊಂಡಿದ್ದೇವೆ. ಮುನ್ನೆಚ್ಚರಿಕೆ ಉದ್ದೇಶಕ್ಕೆ ಈಗಾಗಲೇ ತಾಲೂಕುವಾರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ.
ಆಕ್ಸಿಜನ್ ಬೆಡ್, ಐಸಿಯು ಲಭ್ಯತೆ, ಆಕ್ಸಿಜನ್ ಘಟಕಗಳನ್ನು ಸನ್ನದ್ಧವಾಗಿಡುವಂತೆ ಸೂಚನೆ ನೀಡಿದ್ದೇವೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.