ನವದೆಹಲಿ: ಬಿಹಾರದ ಮಾಜಿ ಸಿಎಂ ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿದೆ. ಉದ್ಯೋಗಕ್ಕಾಗಿ ಜಮೀನು ಪ್ರಕರಣದ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ಈ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 22 ರಂದು ಹೊಸದಿಲ್ಲಿಯಲ್ಲಿರುವ ಇಡಿ ಕಚೇರಿಯಲ್ಲಿ ಹಾಜರಾಗುವಂತೆ ಅವರ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ಗೆ ಹೇಳಿದರೆ, ಲಾಲು ಅವರಿಗೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಡಿಸೆಂಬರ್ 27ರಂದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ತೇಜಸ್ವಿ, ಅವರ ತಾಯಿಯಾದ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಸಹೋದರಿಯರಾದ ಆರ್ಜೆಡಿ ರಾಜ್ಯಸಭಾ ಸಂಸದ ಮಿಸಾ ಭಾರತಿ, ಚಂದಾ ಯಾದವ್ ಮತ್ತು ರಾಗಿಣಿ ಯಾದವ್ ಅವರನ್ನು ಸಹ ಇಡಿ ಈ ಪ್ರಕರಣದಲ್ಲಿ ಪ್ರಶ್ನಿಸಿದೆ.