ಬೆಂಗಳೂರು: ಸಂಸದ ಪ್ರತಾಪ್ ಸಿಂಹರನ್ನು ಸ್ಥಾನದಿಂದ ಅಮಾನತುಗೊಳಿಸಿ, ಬಳಿಕ ಲೋಕಸಭೆ ದಾಳಿಯಲ್ಲಿನ ಅವರ ಪಾತ್ರ ಬಯಲಿಗೆಳೆಯಲು ತನಿಖೆ ನಡೆಸಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಂಸದರುಗಳನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಅಮಾನತು ನಡೆ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಕೆಲಸ ಮಾತ್ರವಲ್ಲ, ಪ್ರಜಾಪ್ರಭುತ್ವದ ಮೂಲ ತತ್ವಕ್ಕೇ ಸಂಚಕಾರ ತರುವಂತದ್ದಾಗಿದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ನಮ್ಮ ದೇಶದ ಮೂಲ ಸಿದ್ಧಾಂತವನ್ನೇ ಬುಡಮೇಲು ಮಾಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ಲೋಕಸಭೆ ಭದ್ರತಾ ಲೋಪ ಎಸಗಲು ಕಾರಣರಾದವರು ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಅದನ್ನು ಪ್ರಶ್ನಿಸುವವರನ್ನು ಅಮಾನತು ಮಾಡಿರುವುದು ದುರದೃಷ್ಟಕರ ವಿಚಾರವಾಗಿದೆ. ಮೊದಲಿಗೆ ಸಂಸದ ಪ್ರತಾಪ್ ಸಿಂಹರನ್ನು ಅಮಾನತುಗೊಳಿಸಿ ಬಳಿಕ ಘಟನೆಯಲ್ಲಿ ಅವರ ಪಾತ್ರವನ್ನು ಬಯಲಿಗೆಳೆಯಲು ತನಿಖೆ ನಡೆಸಬೇಕಾಗಿತ್ತು. ಅವರು ಸಂಸತ್ ಮೇಲೆ ದಾಳಿ ನಡೆಸಿದರು. ಆದರೆ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಭಾರತದ ಹಿಟ್ಲರ್ ತರ ವರ್ತಿಸುತ್ತಿದ್ದಾರೆ. ಬಹುಶಃ ಹಿಟ್ಲರ್ಗೆ ತಮ್ಮನ್ನು ಹೋಲಿಸುವುದರಿಂದ ಅವರು ಸಂತೋಷ ಪಡುತ್ತಿರಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ‘ಭಿನ್ನಾಭಿಪ್ರಾಯದ ಹಕ್ಕು ಪ್ರಜಾಪ್ರಭುತ್ವದ ಮುಲಾಧಾರವಾಗಿದೆ. ವಿಪಕ್ಷಗಳಿಗೆ ತಮ್ಮ ಅಸಮಾಧಾನ, ಆಕ್ಷೇಪಗಳ ಬಗ್ಗೆ ದನಿ ಎತ್ತಲು ಅವಕಾಶ ಕಲ್ಪಿಸಿ, ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡಿ ಹೆಚ್ಚು ಒಳಗೊಳ್ಳುವಿಕೆಯ ಸಮಾಜ ರೂಪಿಸುವುದು ಸರ್ಕಾರದ ಕೆಲಸವಾಗಿದೆ ಎಂದು ಪ್ರಜಾಪ್ರಭುತ್ವ ಅಪಾಯದಲ್ಲಿ’ ಎಂಬ ಹ್ಯಾಷ್ ಟ್ಯಾಗ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಮೂಲಕ ಹರಿಹಾಯ್ದಿದ್ದಾರೆ.