ವಿಜಯಪುರ: ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಪಕ್ಷದ ಅಧ್ಯಕ್ಷರ ವಿರುದ್ಧ ಸಮರ ಮುಂದುವರೆಸಿದ್ದು, ನನ್ನ ವಿರುದ್ಧ ಮಾತನಾಡಲೆಂದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೆಲವು ಹಂದಿ ಹಾಗೂ ಬೀದಿನಾಯಿಗಳನ್ನು ಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನನ್ನ ವಿರುದ್ಧ ಕೆಲವು ಹಂದಿ, ಬೀದಿನಾಯಿಗಳು ಬೊಗಳುತ್ತಿರುತ್ತವೆ ಅದಕ್ಕೆಲ್ಲಾ ಉತ್ತರ ಕೊಡಲು ಆಗುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಚಾಟಿ ಬೀಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನಾನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಂತೆ ಹಾಗೂ ವಿರೋಧ ಪಕ್ಷದ ನಾಯಕನಂತೆ ಪ್ರೋ ಆಯಕ್ಷಿವ್ ಆಗಿ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕದ ಭಾಗದಲ್ಲೂ ಸಮರ್ಥ ನಾಯಕರಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆರ್.ಅಶೋಕ್ ಹಾಗೂ ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ 11 ವಿಧಾನಮಂಡಲ ಅಧಿವೇಶನಗಳಲ್ಲಿ ಕೊನೆಗೆ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲಾಗುತ್ತಿತ್ತು. ಆದರೆ, ಈ ಬಾರಿ ಮೊದಲ ದಿನವೇ ನಾನು ಗಟ್ಟಿ ಧ್ವನಿ ಎತ್ತಿದ್ದರಿಂದ ಮೊದಲ ವಾರದಲ್ಲೇ ಸಮಗ್ರವಾಗಿ ಚರ್ಚಿಸಲು ಅವಕಾಶ ದೊರಕಿತು ಎಂದು ಬಿಜೆಪಿ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.