ಸುವರ್ಣಸೌಧ: ಮದುವೆ, ಶುಭ ಸಮಾರಂಭ, ಭೋಜನ ಕೂಟದಲ್ಲಿ ನಾಯಕರು ಪಕ್ಷಾತೀತ, ಜಾತ್ಯತೀತವಾಗಿ ಸೇರುತ್ತಾರೆ. ಅದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿಯವರು ನನ್ನ ಜೊತೆ ಮಾತನಾಡುವುದು, ನಮ್ಮ ಪಕ್ಷದ ನಾಯಕರು ಅವರ ಜೊತೆ ಮಾತನಾಡುವುದು ಸಹಜ. ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಮನುಷ್ಯರ ಮಧ್ಯೆ ಬಾಂಧವ್ಯ ಮುಖ್ಯ ಎಂದು ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಬಿಜೆಪಿಯ ಯಾವ ಶಾಸಕರೂ ಬಂದಿರಲಿಲ್ಲ. ಪ್ರತಿಪಕ್ಷದ ಕೆಲ ಶಾಸಕರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದೆವು. ಸೋಮಶೇಖರ್, ಶಿವರಾಂ ಹೆಬ್ಬಾರ್ ಹಾಗೂ ವಿಶ್ವನಾಥ್ ಸೇರಿದಂತೆ ಅನ್ಯ ಪಕ್ಷಗಳ 10 ಮಂದಿ ಶಾಸಕರು ಔತಣಕೂಟಕ್ಕಷ್ಟೇ ಹಾಜರಾಗಿದ್ದರು. ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ. ಅವರು ನಮ್ಮ ಪಕ್ಷದ ಶಾಸಕರೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸದನದ ಕಲಾಪ ಸಮಯದಲ್ಲೂ ಕೆಲ ವಿಚಾರಗಳ ಚರ್ಚೆಗೆ ಸಭೆ ಕರೆದಾಗ ಪ್ರತಿಪಕ್ಷಗಳ ನಾಯಕರನ್ನೂ ಆಹ್ವಾನಿಸುತ್ತೇವೆ. ರಾಜಕೀಯ ಮಾಡ ಬಯಸುವವರು ಸಭೆಗೆ ಬರುವುದಿಲ್ಲ. ಸಹಜವಾಗಿ ಭೋಜನಕೂಟಕ್ಕೆ ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ. ಕೆಲವರು ಬರುತ್ತಾರೆ, ಕೆಲವರು ನಿರಾಕರಿಸುತ್ತಾರೆ. ಆತ್ಮೀಯರನ್ನು ನಾವು ಕರೆಯುತ್ತೇವೆ. ತಪ್ಪೇನಿದೆ ಎಂದರು.