◾ ಹೇಯ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವಾಗಲೇ ಬಿಜೆಪಿ ಟಿಕೆಟ್ ಪಡೆದು ಎಂಎಲ್ಎ ಆಗಿ ಆಯ್ಕೆಯಾಗಿದ್ದ ರಾಮ್ದುಲರ್!
ಉತ್ತರ ಪ್ರದೇಶ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಉತ್ತರ ಪ್ರದೇಶದ ದುದ್ಧಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿ ದೋಷಿ ಎಂದು ಸಾಬೀತಾಗಿದೆ. ನ್ಯಾಯಾಲಯವು ಅವರನ್ನು ಅತ್ಯಂತ ಹೇಯ ಕೃತ್ಯ ನಡೆಸಿದ ದೋಷಿ ಎಂದು ತೀರ್ಪು ನೀಡಿದ್ದು, ಡಿಸೆಂಬರ್ 15 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
2014ರಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅಪರಾಧಿ ಎಂದು ಸಾಬೀತಾಗಿದ್ದು, ಅಪರಾಧಿ ಶಾಸಕನನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದೆ.
8 ವರ್ಷದ ಹಿಂದೆ ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಮೈರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆಗ ರಾಮ್ದುಲರ್ ಗೊಂಡ್ ಶಾಸಕರಾಗಿರಲಿಲ್ಲ. ಆದರೆ ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದ್ದರೂ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ, ಕಡತಗಳನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ನವೆಂಬರ್ನಲ್ಲಿಯೇ ವಾದ-ಪ್ರತಿವಾದಗಳು ಪೂರ್ಣಗೊಂಡಿದ್ದು, ನ್ಯಾಯಾಧೀಶರ ವರ್ಗಾವಣೆಯಿಂದಾಗಿ ತೀರ್ಪು ವಿಳಂಬವಾಗಿತ್ತು.
ನಂತರ ನ್ಯಾಯಾಧೀಶರಾಗಿ ಬಂದ ಹಸಾನುಲ್ಲಾ ಖಾನ್ ಪ್ರಕರಣದ ತೀರ್ಪನ್ನು ಡಿಸೆಂಬರ್ 12 ರಂದು ನೀಡಲು ನಿಗದಿಪಡಿಸಿದ್ದರು.