ಫ್ಯಾಶಿಸಂ ಎಂಬ ರೋಗವನ್ನು ನಿರ್ಮೂಲನೆ ಮಾಡುವ ವರೆಗೆ ವಿರಮಿಸಲಾರೆವು : ಅನೀಸ್ ಅಹ್ಮದ್

Prasthutha|

ಮಂಗಳೂರು: ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಫ್ಯಾಶಿಸಂ ಅಪಾಯಕಾರಿಯಾಗಿದ್ದು, ಇದರ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಬಿಜೆಪಿ ಸರ್ಕಾರ ನಿರಂತರ ಬೇಟೆಯಾಡುತ್ತಿದೆ. ಫ್ಯಾಶಿಸಂ ಎಂಬ ರೋಗವನ್ನು ನಿರ್ಮೂಲನೆ ಮಾಡುವ ವರೆಗೆ ಪಾಪ್ಯುಲರ್ ಫ್ರಂಟ್ ವಿರಮಿಸುವುದಿಲ್ಲ ಎಂದು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.

- Advertisement -

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 13ನೇ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳೂರಿನ ಉಳ್ಳಾಲ ಒಂಬತ್ತುಕೆರೆ ಅನಿಲ ಕಂಪೌಂಡ್ ಮೈದಾನದಲ್ಲಿ ಏರ್ಪಡಿಸಿದ್ದ ಯುನಿಟಿ ಮಾರ್ಚ್ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಇಲ್ಲಿ ಜೀವಿಸಬೇಕಾದರೆ ಸರ್ಕಾರದ ಪರವಾಗಿ ಇರಬೇಕು, ಇಲ್ಲದಿದ್ದರೆ ಯುಎಪಿಎಯಡಿ ಪ್ರಕರಣ ದಾಖಲಿಸುವುದು, ಈಡಿ, ಐಟಿ, ಎನ್ಐಎ ಮುಂತಾದ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಹೆದರಿಸುವ ಪ್ರಯತ್ನಗಳು ನಡೆಯುತ್ತಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಪಾಪ್ಯುಲರ್ ಫ್ರಂಟ್ ಮಣಿಯುವುದಿಲ್ಲ. ಎಲ್ಲೇ ಅನ್ಯಾಯ ನಡೆದರೂ ಅದರ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.

- Advertisement -

ಪಾಪ್ಯುಲರ್ ಫ್ರಂಟ್ ಧ್ವನಿ ಇಲ್ಲದವರ, ದುರ್ಬಲರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ಯಾವುದೇ ಕಾರಣಕ್ಕೂ ಫ್ಯಾಶಿಸಂನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆರೆಸ್ಸೆಸ್ ಈ ದೇಶದ ಶತ್ರು ಮಾತ್ರವಲ್ಲ, ದೊಡ್ಡ ಸಮಸ್ಯೆಯೂ ಆಗಿದೆ. ಈ ಸತ್ಯವನ್ನು ಪಾಪ್ಯುಲರ್ ಫ್ರಂಟ್ ನಿರಂತರವಾಗಿ ಹೇಳುತ್ತಾ ಬಂದಿದೆ. ಇದಕ್ಕಾಗಿ ನಮ್ಮ ಸಂಘಟನೆಯನ್ನು ಗುರಿಯಾಗಿಸಲಾಗುತ್ತಿದೆ ಎಂದರು.

ಸರ್ಕಾರದ ವಿರುದ್ಧ ಧ್ವನಿ ಎತ್ತಿದವರೆಲ್ಲರನ್ನೂ ಗುರಿಯಾಗಿಸಲಾಗುತ್ತಿದೆ. ರೈತರು, ಸಿಖ್ಖರು, ದಲಿತರ, ವಿದ್ಯಾರ್ಥಿಗಳು ಯಾರೇ ಆದರೂ ಅವರನ್ನು ಬೇಟೆಯಾಡಲಾಗುತ್ತಿದೆ. ಆದ್ದರಿಂದ ಆರೆಸ್ಸೆಸ್ ಎಂಬ ರೋಗವನ್ನು ನಿರ್ಮೂಲನೆ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಅವರು ಮೊಗವೀರರು, ಮುಸ್ಲಿಮರು, ಬಂಟರು ಒಂದೇ ಕರಳುಬಳ್ಳಿಯ ಮಕ್ಕಳಾಗಿದ್ದು, ಇವರ ನಡುವೆ ದ್ವೇಷ ಬಿತ್ತುವ ಕೆಲಸವನ್ನು ಮಧ್ಯ ಏಷ್ಯಾದಿಂದ ಬಂದ ಆರ್ಯನ್ ಬ್ರಾಹ್ಮಣರು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದುತ್ವ ಎಂಬುದು ರಾಜಕೀಯ ಅಧಿಕಾರಕ್ಕಾಗಿ ರೂಪಿಸಿದ ಸಿದ್ಧಾಂತವಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣವಾದರೆ ಮುಸ್ಲಿಮರು ಮಾತ್ರವಲ್ಲ ಶೂದ್ರರು, ಅಸ್ಪೃಶ್ಯರು, ದಲಿತರು ಕೂಡ ಬೇಟೆಯಾಡಲ್ಪಡಲಿದ್ದಾರೆ. ಸಾವಿರಾರು ವರ್ಷಗಳ ಹಿಂದಿನ ಚಾತುರ್ವಣ್ಯ ಪದ್ಧತಿ ಜಾರಿಗೆ ತಂದು ಈ ವರ್ಗಗಳನ್ನು ಗುಲಾಮಿ ಸ್ಥಿತಿಗೆ ತಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾದರೂ ವಿರೋಧ ಪಕ್ಷ ಕಾಂಗ್ರೆಸ್ ಗೆ ಮಾತನಾಡಲು ನಾಲಗೆ ಇಲ್ಲವಾಗಿದೆ. ಇಲ್ಲಿ ವಿರೋಧ ಪಕ್ಷ ಮಾತ್ರವಿದೆ, ಯಾವುದೇ ವಿರೋಧವಿಲ್ಲ. ದೇಶದ ದೊಡ್ಡ ಸಮಸ್ಯೆ ನಿರುದ್ಯೋಗ, ಬಡತನ ಅಲ್ಲ, ಫ್ಯಾಶಿಸಂ ನಿಜವಾದ ಸಮಸ್ಯೆ ಎಂದು ಕಳೆದ 25 ವರ್ಷಗಳಿಂದ ಪಾಪ್ಯುಲರ್ ಫ್ರಂಟ್ ಹೇಳುತ್ತಾ ಬರುತ್ತಿದೆ. ಫ್ಯಾಶಿಸಂ ಅನ್ನು ಸೋಲಿಸದ ಹೊರತು ದೇಶಕ್ಕೆ ಉಳಿಗಾಲವಿಲ್ಲ. ಆದ್ದರಿಂದ ನೈಜ ಶತ್ರುವನ್ನು ಅರಿತು ದೇಶದ ರಕ್ಷಣೆಗೆ ಎಲ್ಲ ಮೂಲನಿವಾಸಿಗಳು ಒಂದಾಗಬೇಕು ಎಂದು ಯಾಸಿರ್ ಹಸನ್ ಕರೆ ನೀಡಿದರು.

ಪಾಪ್ಯುಲರ್ ಫ್ರಂಟ್ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ, ವಿನಾಶಕಾರಿ ಸಿದ್ಧಾಂತ ಹೊಂದಿರುವ ಆರೆಸ್ಸೆಸ್ ನೊಂದಿಗೆ ಪಾಪ್ಯುಲರ್ ಫ್ರಂಟ್ ಯಾವುದೇ ಕಾರಣಕ್ಕೂ ರಾಜಿರಹಿತ ಹೋರಾಟ ನಡೆಸಲಿದೆ. ದೇಶ ಉಳಿಸಬೇಕಾದರೆ ಫ್ಯಾಸಶಿಸಂ ವಿರುದ್ಧ ಬೃಹತ್ ಜನಾಂದೋಲನ ನಡೆಯಬೇಕಾಗಿದೆ ಎಂದು ಹೇಳಿದರು.

ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲು ಮಾತನಾಡಿ, ಅನ್ಯಾಯ, ದೌರ್ಜನ್ಯದ ವಿರುದ್ಧ ಹೋರಾಡುತ್ತಿರುವ ಪಾಪ್ಯುಲರ್ ಫ್ರಂಟ್ ಗೆ ಹೆಗಲು ಕೊಡಲು ಮುಂದಿನ ಜನವರಿ 1ರಂದು ಚಂದ್ರಶೇಖರ್ ಆಜಾದ್ ನೇತೃತ್ವದಲ್ಲಿ ದಲಿತ ಸೇನೆ ರೂಪುಗೊಳ್ಳಲಿದೆ ಎಂದು ಪ್ರಕಟಿಸಿದರು.

ಉಡುಪಿಯ ಕ್ರೈಸ್ತ ಧರ್ಮಗುರು ರೆ.ಫಾದರ್ ವಿಲಿಯಂ ಮಾರ್ಟಿಸ್ ಮಾತನಾಡಿ, ಮುಸ್ಲಿಮರು, ಕ್ರೈಸ್ತರು, ದಲಿತರು, ಹಿಂದುಳಿದವರು ಸೇರಿ ಏಕತೆಯಿಂದ ಆರೆಸ್ಸೆಸನ್ನು ಎದುರಿಸಿದರೆ 2024ರಲ್ಲಿ ಈ ದೇಶ ಸೌಹಾರ್ದದ ನೆಲೆಬೀಡಾಗಲಿದೆ ಎಂದರು.

ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ, ರಾಜ್ಯ ಸಮಿತಿ ಸದಸ್ಯರಾದ ಮಜೀದ್ ತುಂಬೆ, ಎ.ಕೆ.ಅಶ್ರಫ್, ಉಳ್ಳಾಲ ಫಿಶ್ ಮಿಲ್ ಅಸೋಶಿಯೇಷನ್ ಅಧ್ಯಕ್ಷ ಎಚ್.ಕೆ.ಖಾದರ್, ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ, ತೌಹೀದ್ ಮಸ್ಜಿದ್ ಅಧ್ಯಕ್ಷ ಫಿರೋಝ್ ಉಳ್ಳಾಲ, ಉಳ್ಳಾಲ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಮುಖಂಡರಾದ ಮಜೀದ್ ಅಹ್ಮದ್, ಹಸೈನಾರ್, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಇಸ್ಮಾಯೀಲ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

ಪಾಪ್ಯುಲರ್ ಫ್ರಂಟ್ ಯುನಿಟಿ ಮಾರ್ಚ್ ನೊಂದಿಗೆ ಹೆಜ್ಜೆ ಹಾಕಿದ ಸಹಸ್ರ ಸಂಖ್ಯೆಯ ಸಾರ್ವಜನಿಕರು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ  ದಿನಾಚರಣೆಯ ಅಂಗವಾಗಿ ನಡೆದ ಯುನಿಟಿ ಮಾರ್ಚ್ ಉಳ್ಳಾಲದ ಭಾರತ್ ಪ್ರೌಢ ಶಾಲೆಯ ಮೈದಾನದಿಂದ ಪ್ರಾರಂಭವಾಗಿ ಮುಕ್ಕಚ್ಚೇರಿ ಮೂಲಕ ಸಾಗಿ ಬಂದು ಒಂಬತ್ತುಕೆರೆಯ ಅನಿಲ ಕಂಪೌಂಡ್ ಮೈದಾನದಲ್ಲಿ ಸಮಾನಪನಗೊಂಡಿತು.

ಪಾಪ್ಯುಲರ್ ಫ್ರಂಟ್ ಧ್ವಜ ಹಸ್ತಾಂತರದೊಂದಿಗೆ ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ ಯುನಿಟಿ ಮಾರ್ಚ್ ಗೆ ಚಾಲನೆ‌ ನೀಡಿದರು. ಪರೇಡ್ ನೇತೃತ್ವವನ್ನು ಸಫ್ವಾನ್ ಮಂಗಳೂರು ವಹಿಸಿದ್ದರು. ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಗೌರವ ವಂದನೆಯನ್ನು ಸ್ವೀಕರಿಸಿದರು.

ಈ ವೇಳೆ ಸಮವಸ್ತ್ರಧಾರಿ ಕೇಡರ್ ಗಳ ಆಕರ್ಷಕ ಪೆರೇಡ್ ಜೊತೆಗೆ ಸಹಸ್ರ ಸಂಖ್ಯೆಯ ಸಾರ್ವಜನಿಕರು ಹೆಜ್ಜೆ ಹಾಕಿದರು. ಬಿರು ಬಿಸಿಲ ಮಧ್ಯೆ ನಡೆದ ಜಾಥಾದಲ್ಲಿ ಕ್ರಾಂತಿ ಘೋಷಣೆಗಳು ಮತ್ತು ಕರತಾಡನ ಮುಗಿಲು ಮುಟ್ಟಿದ್ದವು.

Join Whatsapp