ಲಖನೌ:ಗುಟ್ಕಾ ಕಂಪನಿಗಳಿಗೆ ಜಾಹೀರಾತು ಸಂಬಂಧ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನ್ಯಾಯಾಂಗ ನಿಂದನೆ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರವು ಅಲಹಾಬಾದ್ ನ್ಯಾಯಾಲಯದ ಲಖನೌ ಪೀಠಕ್ಕೆ ಮಾಹಿತಿ ನೀಡಿತು.
ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರೂ ಕೂಡ ಹಾನಿಕಾರಕ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡುವ ನಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೊರೆ ಹೋದ ನಂತರ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠವು ಸೆ. 2022ರಲ್ಲಿ ಕೇಂದ್ರಕ್ಕೆ ಕ್ರಮ ಕೈಗೊಳ್ಳುವಂತೆ ಕೇಳಿತ್ತು.
ಸುಪ್ರೀಂ ಕೋರ್ಟ್ನಲ್ಲೂ ಇದೇ ವಿಷಯದ ವಿಚಾರಣೆ ನಡೆಯುತ್ತಿದ್ದು, ತ್ವರಿತ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರದ ವಕೀಲರು ಶುಕ್ರವಾರ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಈ ಮನವಿ ಆಲಿಸಿದ ನಂತರ ಪೀಠ ವಿಚಾರಣೆಯನ್ನು ಮೇ 9, 2024ಕ್ಕೆ ನಿಗದಿಪಡಿಸಿದೆ.