ಮಂಗಳೂರು: ವಿಹಾರಕ್ಕೆಂದು ಕಡಲತೀರಕ್ಕೆ ತೆರಳಿದ್ದ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮೃತದೇಹ ಉಳ್ಳಾಲದ ಸೋಮೇಶ್ವರದಲ್ಲಿ ಪತ್ತೆಯಾಗಿದೆ.
ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಯೆಶ್ವಿತ್ (18), ಕುಂಜತ್ತೂರು ಮಜಲ್ ನಿವಾಸಿ ಯುವರಾಜ್ (18) ಸಮುದ್ರಪಾಲಾದವರು.
ನಿನ್ನೆ ಮುಳುಗಡೆಯಾದ ಸಂಜೆಯಿಂದ ಬೆಳಗ್ಗಿನವರೆಗೂ ಸ್ಥಳೀಯ ಈಜುಗಾರರು ನಿರಂತರ ಕಾರ್ಯಾಚರಣೆಯಲ್ಲಿದ್ದರು. ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
ಇಬ್ಬರು ಸಮೀಪದ ಸೋಮೇಶ್ವರ ಪರಿಜ್ಞಾನ ಪಿಯುಸಿ ಕಾಲೇಜಿನ ದ್ವಿತೀಯ ವರ್ಷ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜು ಮುಗಿಸಿ ಮಧ್ಯಾಹ್ನ ಬಳಿಕ ಸಮುದ್ರ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ಸಮುದ್ರದ ಅಲೆಗಳ ನಡುವೆ ಸಿಲುಕಿದರೆ, ಇನ್ನೋರ್ವ ವಿದ್ಯಾರ್ಥಿ ಆತನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಇಬ್ಬರು ಅಲೆಗಳ ನಡುವೆ ಸಿಲುಕಿ ನಾಪತ್ತೆಯಾಗಿದ್ದರು.