ದಿಶಾ ರವಿ ಹಿಂದುನಾ, ಕ್ರಿಶ್ಚಿಯನ್ನಾ? | ಬಿಜೆಪಿಗರ ಸುಳ್ಳು ಸುದ್ದಿಗೆ ತಿರುಗೇಟು; #DishaAnnappaRavi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್!

Prasthutha|

ಬೆಂಗಳೂರು : ರೈತರ ಹೋರಾಟದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪರಿಸರವಾದಿ ಗ್ರೆಟಾ ಥಂಬರ್ಗ್ ಶೇರ್ ಮಾಡಿದ್ದ ‘ಟೂಲ್ ಕಿಟ್’ ವಿವಾದಕ್ಕೆ ಸಂಬಂಧಿಸಿ ಬಂಧಿತರಾಗಿರುವ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ಬಗ್ಗೆ ಬಿಜೆಪಿ ಬೆಂಬಲಿಗರ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಪಪ್ರಚಾರಕ್ಕೆ ಇಳಿದಿವೆ. ಅದರಲ್ಲೂ ಆಕೆಯ ಧರ್ಮದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ.

- Advertisement -

ದಿಶಾ ರವಿ ಕೇರಳ ಮೂಲದ ಸಿರಿಯನ್ ಕ್ರಿಶ್ಚಿಯನ್, ಆಕೆಯ ಪೂರ್ಣ ಹೆಸರು ದಿಶಾ ರವಿ ಜೋಸೆಫ್ ಎಂದೆಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡಲಾಗಿತ್ತು. ಆದರೆ, ಇದೀಗ ಸತ್ಯ ಹೊರಬಿದ್ದಿದ್ದು, ಈ ಕುರಿತು ‘ದ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ದಿಶಾ ಲಿಂಗಾಯತ ಸಮುದಾಯಕ್ಕೆ ಸೇರಿದವಳು. ಆಕೆಯ ಪೂರ್ಣ ಹೆಸರು ದಿಶಾ ಅಣ್ಣಪ್ಪ ರವಿ ಎಂದು ಇದೀಗ ಸ್ಪಷ್ಟವಾಗಿದೆ.  

- Advertisement -

ದಿಶಾ ರವಿ ಹಿಂದೂ ಅಲ್ಲ, ಕ್ರೈಸ್ತ ಧರ್ಮಕ್ಕೆ ಸೇರಿದವಳು ಎಂಬ ಸುಳ್ಳುಗಳನ್ನು ಆಕೆಯ ಕುಟುಂಬಸ್ಥರು ನಿರಾಕರಿಸಿದ್ದಾರೆ. ಆಕೆಯ ಕುಟುಂಬ ಸ್ನೇಹಿತರಾದ ನ್ಯಾಯವಾದಿ ಪ್ರಸನ್ನ ಆರ್. ಮಾಹಿತಿ ನೀಡಿದ್ದಾರೆ.

ಆಕೆಯ ತಾಯಿಯ ಹೆಸರು ಮಂಜುಳಾ ನಂಜಯ್ಯ ಮತ್ತು ತಂದೆಯ ಹೆಸರು ರವಿ ಅಣ್ಣಪ್ಪ. ಅವರು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರಿನವರು ಎಂದು ಅವರು ತಿಳಿಸಿದ್ದಾರೆ.

ದಿಶಾ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇಲ್ಲಿ ದಿಶಾಳ ಧರ್ಮ ಮುಖ್ಯವಾಗುವುದಿಲ್ಲ. ಆಕೆ ಕ್ರೈಸ್ತ ಅಥವಾ ಹಿಂದೂ ಆದರೆ, ಅದು ಇಲ್ಲಿ ಹೇಗೆ ಮುಖ್ಯವಾಗುತ್ತದೆ? ಆಕೆ ಪರಿಸರ ಪ್ರೇಮಿ ಮತ್ತು ಎಲ್ಲಾ ಕಡೆಯಲ್ಲೂ ಆಕೆಗೆ ಸ್ನೇಹಿತರಿದ್ದಾರೆ. ಆಕೆ ಲಿಂಗಾಯತ ಕುಟುಂಬದಲ್ಲಿ ಬೆಳೆದಿದ್ದರೂ, ಯಾವುದೇ ಧರ್ಮವನ್ನೂ ಪಾಲಿಸಿಲ್ಲ. ದ್ವೇಷ ಹರಡಲು ಬಳಸಲಾಗುತ್ತಿರುವ ಆಕೆಯ ಧರ್ಮದ ಗುರುತನ್ನು ತಪ್ಪಾಗಿ ಹರಡುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಪ್ರಸನ್ನ ಹೇಳಿದ್ದಾರೆ.

ಆಕೆಗೆ ವಿದೇಶಿ ದೇಣಿಗೆಗಳು ಬರುತ್ತಿದ್ದವು ಎಂಬ ಮಾಧ್ಯಮ ವರದಿಗಳ ಬಗ್ಗೆಯೂ ಆಕೆಯ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ದಿಶಾ ಬಗ್ಗೆ ತುಂಬಾ ಅಸಹ್ಯಕರ ಸುಳ್ಳುಗಳನ್ನು ಹರಡಲಾಗುತ್ತಿದೆ. ಆಕೆಗೆ ವಿದೇಶಿ ದೇಣಿಗೆ ಬಂದಿದೆ ಎಂದೂ ಕನ್ನಡ ಚಾನೆಲ್ ಗಳು ಹೇಳಿವೆ. ಆದರೆ, ಇವೆಲ್ಲಾ ಸುಳ್ಳು ಎಂದು ಸುಲಭವಾಗಿ ಸಾಬೀತುಪಡಿಸಬಹುದು. ಆದರೆ, ಚಾನೆಲ್ ಗಳು ಸುಳ್ಳುಗಳನ್ನು ಹರಡುತ್ತಿವೆ” ಎಂದು ದಿಶಾಳ ಕುಟುಂಬಸ್ಥರು ಹೇಳಿದ್ದಾರೆ.

ನಾವು ಬೆಂಗಳೂರಿನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮತ್ತು ಗಿಡ ನೆಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದೆವು. ಅದಕ್ಕೆಲ್ಲಾ ನಾವು ನಮ್ಮೊಳಗೇ ಖರ್ಚುಗಳನ್ನು ಭರಿಸುತ್ತಿದ್ದೆವು ಎಂದು ದಿಶಾಳ ಸ್ನೇಹಿತರು ಹೇಳಿದ್ದಾರೆ.

ಈ ನಡುವೆ, ಟ್ವಿಟರ್ ನಲ್ಲಿ ದಿಶಾ ರವಿ ಜೋಸೆಪ್ ಹ್ಯಾಶ್ ಟ್ಯಾಗ್ ಬಳಸಿ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು. ಆದರೆ, ಇಂದು ಇದೀಗ ಅದಕ್ಕೆ ಪ್ರತಿಯಾಗಿ #DishaAnnappaRavi ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ಬಿಜೆಪಿ ಬೆಂಬಲಿಗ ಮಾಧ್ಯಮಗಳು ಮತ್ತು ಕಾರ್ಯಕರ್ತರ ಸುಳ್ಳುಗಳನ್ನು ಆಗಿಂದಾಗಲೇ ಬಯಲಿಗೆಳೆಯುತ್ತಿರುವ ನೆಟ್ಟಿಗರ ಇತ್ತೀಚಿನ ನಡೆ ಮಹತ್ವದ ಬೆಳವಣಿಗೆಯಾಗಿದೆ.  



Join Whatsapp