ಬೆಂಗಳೂರು : ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಬಂದಿದ್ದ ಮೂವರು. ‘ಕೊಡ್ತೀರೋ ಇಲ್ವೋ’ ಎಂದು ನನಗೆ ಬೆದರಿಕೆ ಹಾಕಿದ್ದರು. ಹೀಗಿರುವಾಗ, ಜನ ಸಾಮಾನ್ಯರ ಕಥೆಯೇನು? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳನ್ನು ಗುರುತು ಮಾಡಲಾಗುತ್ತಿದೆ ಎಂದು ಆಪಾದಿಸಿದ್ದ ಕುಮಾರಸ್ವಾಮಿ, ಇಂದು ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇಲ್ಲ. ಧರ್ಮದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಹಣ ಸಂಗ್ರಹಿಸುವಂತೆ ಇಂತಹ ಸಂಘಟನೆಗಳಿಗೆ ಅನುಮತಿ ಕೊಟ್ಟಿದ್ದಾದರೂ ಯಾರು? ಸರ್ಕಾರ ಏನಾದ್ರೂ ಅನುಮತಿ ಕೊಟ್ಟಿದ್ಯಾ? ಎಂದು ಅವರು ಪ್ರಶ್ನಿಸಿದರು.
ನನ್ನ ಮನೆ ಹತ್ತಿರಕ್ಕೂ ದಿನನಿತ್ಯ ಮೂರು ಮೂರು ಸಂಘಟನೆಗಳು ಮಂದಿರ ನಿರ್ಮಾಣದ ದೇಣಿಗೆ ಪಡೆಯಲು ಬರುತ್ತಿವೆ. ಅನುಮತಿ ಇದೆಯಾ? ಎಂದು ಪ್ರಶ್ನಿಸಿದ್ರೆ , ಮಂದಿರ ದೇಶದ ಪ್ರತೀಕ ಎನ್ನುತ್ತಾರೆ. ಇಲ್ಲಿಯವರೆಗೆ ಹಣ ಸಂಗ್ರಹದ ಬಗ್ಗೆ ಇವರ್ಯಾರೂ ಲೆಕ್ಕ ಕೊಟ್ಟಿದ್ದಾರಾ? ರಾಮನ ಹೆಸರಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ದೇಣಿಗೆ ನೀಡುವಂತೆ ಬೆದರಿಕೆ ಹಾಕ್ತಾರೆ. ಸಂಘಟಕರ ಮಾತು ಕೇಳಿದರೆ ಭಯ ಆಗುತ್ತದೆ. ನನ್ನ ಕಥೆಯೇ ಈ ರೀತಿಯಾದರೆ, ಜನಸಾಮಾನ್ಯರ ಕಥೆಯೇನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪಾರದರ್ಶಕತೆ ಬಗ್ಗೆ ಮಾತಾಡಿದರೆ ರಾಮನ ಹೆಸರನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸುತ್ತಾರೆ. ನಾನು ರಾಮನ ವಿರುದ್ಧ ಮಾತಾಡಲಿಲ್ಲ. ರಾಮನ ಹೆಸರಿಗೆ ಅವಮಾನ ಮಾಡಲಿಲ್ಲ. ಪೋಲಿ ಪುಂಡರಿಂದ ಹಣ ಸಂಗ್ರಹಣೆ ನಿಲ್ಲಬೇಕು. ಪಾರದರ್ಶಕತೆ ಕಾಪಾಡಿ, ಅದನ್ನ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಎಂದು ಅವರು ಕೇಳಿದರು.
ಬೆವರು ಸುರಿಸಿ ದುಡಿದ ಹಣ ಪುಂಡರ ಕೈ ಸೇರಬಾರದು. ರಾಮನ ಹೆಸರಿನಲ್ಲಿ ಪಾರದರ್ಶಕರತೆ ಇಲ್ಲದೇ ಬೀದಿ ಬೀದಿ ದುಡ್ಡು ವಸೂಲಿ ಮಾಡೋದು ನಿಲ್ಲಲಿ ಅನ್ನೋದು ನನ್ನ ಆಶಯ ಎಂದು ಹೇಳಿದರು.
ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವಾತಂತ್ರವೂ ಇಲ್ಲ. ದೇಶದಲ್ಲಿ ಮಾಧ್ಯಮಗಳಿಗೂ ಸ್ವಾತಂತ್ರ್ಯವಿಲ್ಲ. ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.