ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಬಿಜೆಪಿ ವಶ: ಕಾಂಗ್ರೆಸ್‌‌ಗೆ ಒಲಿದ ತೆಲಂಗಾಣ

Prasthutha|

ನವದೆಹಲಿ: 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲಾದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ ಗಢದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನಾದೇಶ ಲಭಿಸಿದೆ.

- Advertisement -

ತೆಲಂಗಾಣದ ಜೊತೆಗೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗುತ್ತದೆ ಎಂದು ಕಾಂಗ್ರೆಸ್‌ ನಾಯಕರು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ತೆಲಂಗಾಣ ಮಾತ್ರ ಕಾಂಗ್ರೆಸ್‌ಗೆ ಒಲಿದಿದೆ. ಮೊದ ಮೊದಲು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಮುನ್ನಡೆಗೆ ಬಂದರೂ ನಂತರ ಬಿಜೆಪಿ ಚೇತರಿಸಿಕೊಂಡು ಸ್ಪಷ್ಟ ಬಹುಮತ ಪಡೆದಿದೆ. ಈ ಫಲಿತಾಂಶ ಕಾಂಗ್ರೆಸ್‌ಗೆ ಮತ್ತೆ ಅವಲೋಕನ ಮಾಡುವಂತೆ ಮಾಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಇದೇ ಮಾದರಿಯನ್ನೇ ಪಂಚ ರಾಜ್ಯ ಚುನಾವಣೆಯಲ್ಲೂ ಅನುಸರಿಸಿತ್ತು. ಚುನಾವಣೆ ನಡೆದ ಐದೂ ರಾಜ್ಯಗಳ ಪೈಕಿ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ಆಯಾ ರಾಜ್ಯಗಳ ಸ್ಥಿತಿಗತಿಗೆ ಅನುಗುಣವಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಆದರೆ, ಮತದಾರ ಗ್ಯಾರಂಟಿಗಳಿಗೆ ಮನ ಸೋತಿಲ್ಲ ಅನ್ನೋದು ಚುನಾವಣೆ ಫಲಿತಾಂಶದಲ್ಲಿ ವ್ಯಕ್ತವಾಗ್ತಿದೆ. ರಾಜಸ್ಥಾನ, ಮಧ್ಯ ಪ್ರದೇಶ ಮಾತ್ರವಲ್ಲ, ಛತ್ತೀಸ್‌ಗಢ ರಾಜ್ಯದಲ್ಲೂ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಬಿಜೆಪಿ ಜಯ ಸಾಧಿಸಿದೆ.

- Advertisement -

ರಾಜಸ್ಥಾನ:
ರಾಜಸ್ಥಾನದಲ್ಲಿ ಬಿಜೆಪಿ ಮ್ಯಾಜಿಕ್ ಸಂಖ್ಯೆ 100ನ್ನು ದಾಟುತ್ತಿದೆ. ಆರಂಭದಲ್ಲಿ ಕಾಂಗ್ರೆಸ್ ಇಲ್ಲಿ ಪ್ರಬಲ ಪೈಪೋಟಿ ಕಂಡುಬಂದರೂ ಕೂಡ ನಂತರದ ಮತ ಎಣಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

ಮಧ್ಯಪ್ರದೇಶ:

ಮಧ್ಯಪ್ರದೇಶದಲ್ಲಿ ಬಿಜೆಪಿ ಮ್ಯಾಜಿಕ್ ಸಂಖ್ಯೆ 116ನ್ನು ದಾಟಿ 155ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಐತಿಹಾಸಿಕ ಜಯದತ್ತ ದಾಪುಗಾಲಿಟ್ಟಿದೆ.

ಶಿವರಾಜ್ ಸಿಂಗ್ ಚವ್ಹಾಣ್, ಜ್ಯೋತಿರಾತ್ಯ ಸಿಂಧ್ಯ ಅವರ ಜೋಡೆತ್ತಿನ ಹೋರಾಟ ಎದುರಾಳಿ ಕಾಂಗ್ರೆಸ್‍ನ್ನು ಮಣಿಸಿದೆ. ಬಿಜೆಪಿ ನೀಡಿದ್ದ ಅಯೋಧ್ಯೆಯ ರಾಮಮಂದಿರ ಉಚಿತ ತೀರ್ಥ ಯಾತ್ರೆ, ಮಹಿಳಾ ಸಬಲೀಕರಣ ಹಲವು ಭರವಸೆಗಳು ಇಲ್ಲಿ ವರ್ಕೌಟ್ ಆಗಿದೆ.

ಛತ್ತೀಸ್‌ಗಢ:

ಛತ್ತೀಸ್‌ಗಢದಲ್ಲಿ ಬಿಜೆಪಿ ಮ್ಯಾಜಿಕ್ ಸಂಖ್ಯೆ 46ನ್ನು ದಾಟಿ ಅಧಿಕಾರದತ್ತ ನಡೆಯುತ್ತಿದೆ. ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‍ಗೆ ಮುನ್ನಡೆ ಎಂದು ಹೇಳಲಾಗುತ್ತಿದ್ದು, ಆದರೆ ಬಿಜೆಪಿ ಗೆಲವಿನ ನಾಗಾಲೋಟದಲ್ಲಿದೆ.

ಈ ಬಾರಿಯ ಚುನಾವಣೆಯಲ್ಲಿ ಮೋದಿಜಿ ಗ್ಯಾರಂಟಿಗೆ ಜಯ ದೊರೆತಿದೆ ಎಂದು ಛತ್ತೀಸ್‍ಗಢದ ಮಾಜಿ ಮುಖ್ಯಮಂತ್ರಿ ರಮಣ್‍ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡಕ್ಕೂ ಹೋಗಿತ್ತು. ಎಲ್ಲೆಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಎಂದಿದ್ದರೋ ಅಲ್ಲೆಲ್ಲ ಇವತ್ತು ಕಾಂಗ್ರೆಸ್ ಚೋಡೋ ಆಗಿದೆ ಎಂದು ಕರ್ನಾಟಕ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.

ತೆಲಂಗಾಣ:

ಛತ್ತೀಸ್‌ಗಢದಲ್ಲಿ ಬಿಜೆಪಿ ಮ್ಯಾಜಿಕ್ ಸಂಖ್ಯೆ 60ನ್ನು ದಾಟಿ ಅಧಿಕಾರ ಹಿಡಿಯಲಿದೆ. ದಕ್ಷಿಣ ಭಾರತದ ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 10 ವರ್ಷಗಳ ಕಾಲ ಬಿಆರ್‍ಎಸ್‍ನ ಕೆ.ಸಿ.ಚಂದ್ರಶೇಖರ್ ರಾವ್ ಆಡಳಿತ ಕೊನೆಗೊಂಡಿದೆ. ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತೆಲಂಗಾಣ ಚುನಾವಣಾ ಪ್ರಚಾರಕ್ಕಿಳಿದು ಶತಾಯಗತಾಯ ಕಾಂಗ್ರೆಸ್‍ನ್ನು ಗೆಲ್ಲಿಸಬೇಕೆಂಬ ಛಲ ಕೊನೆಗೂ ಫಲ ನೀಡಿದಂತೆ ಕಾಣುತ್ತಿದೆ.

ತೆಲಂಗಾಣದ ಕೊಡಂಗಲ್ ಕ್ಷೇತ್ರದಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಜಯಭೇರಿ ಬಾರಿಸಿದ್ದು, ಮತ್ತೊಂದು ಕ್ಷೇತ್ರದಲ್ಲೂ ಕೂಡ ಮುನ್ನಡೆ ಸಾಧಿಸಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಈಗ ಕೇವಲ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ರೇವಂತ್ ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ತೆಲಂಗಾಣ ವಿಜಯದ ಕುರಿತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು, 10 ವರ್ಷಗಳ ಕೆಸಿಆರ್ ಆಡಳಿತದಿಂದ ಜನ ಬೇಸತ್ತು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನಂಬಿ ತೆಲಂಗಾಣದಲ್ಲಿ ಗೆಲುವು ನೀಡಿದ್ದಾರೆ ಎಂದು ಹೇಳಿದ್ದಾರೆ.



Join Whatsapp