ಮೈಸೂರು: ಸಂಸದ ಪ್ರತಾಪ್ ಸಿಂಹ ತಮ್ಮ ಹೆಸರನ್ನು ಇತ್ತೀಚಿಗೆ ಬದಲಾವಣೆ ಮಾಡಿಕೊಂಡಿದ್ದಾರೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಅದಕ್ಕೆ ಇನ್ನೊಂದು ‘M’ ಸೇರಿಸಿಕೊಂಡಿದ್ದಾರೆ. ‘M’ ಅಂದರೆ mockery (ಅಪಹಾಸ್ಯ) ಪ್ರತಾಪ್ ಸಿಂಹ ಅಂತ ಹೇಳಬಹುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ತಾನು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ್, 2 ಲಕ್ಷ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅದು ಉಲ್ಟಾ ಆಗುತ್ತದೆ. ಅವರು 2 ಲಕ್ಷ ಅಂತರದಲ್ಲಿ ಸೋಲುತ್ತಾರೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ತಂದ ಯೋಜನೆಗಳ ನಾನು ತಂದೆ ಅಂತ ಹೇಳಿಕೊಳ್ಳುತ್ತಾ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಕೇಂದ್ರದಿಂದ ನೀವು ಏನು ತಂದಿದ್ದೀರಿ ಅಂತ ಹೇಳಿ. ರಾಜ್ಯದಲ್ಲಿ ಉಡಾನ್ ಯೋಜನೆಯಡಿ ಪ್ರತಿ ಜಿಲ್ಲೆಗೂ ವಾಯು ಸಾರಿಗೆ ಸಂಪರ್ಕ ಕೊಡುತ್ತೇವೆ ಎಂದಿದ್ದರು. ಎಲ್ಲಿ ಮಾಡಿದ್ದೀರಿ ಅಂತ ಹೇಳಿ ಎಂದು ಲಕ್ಷ್ಮಣ್ ಪ್ರಶ್ನಿಸಿದರು.