ರಾಮನಗರ: ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಹೆಚ್.ಡಿ. ಕುಮಾರಸ್ವಾಮಿಯನ್ನು ಭೇಟಿಮಾಡಿ ದೀರ್ಘ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಬಹಳ ದಿನಗಳ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಬೇಕಿತ್ತು. ಬಿಝಿ ಕಾರಣ ಆಗಿರಲಿಲ್ಲ. ಇವತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯ ಉದ್ದೇಶದಿಂದ ಭೇಟಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕೇತುಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದರು.ಮುಂದೆ ಎರಡು ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ ಮತ್ತು ಜನರ ಹಿತದೃಷ್ಟಿಯಿಂದ ಒಂದಾಗಿ ಕೆಲಸ ಮಾಡುತ್ತದೆ. 2024 ರ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರು ಗೆದ್ದು ಪ್ರಧಾನಿ ಆಗುವುದಕ್ಕೆ ಕಾರ್ಯತಂತ್ರ ಇಂದಿನ ಭೇಟಿಯ ಉದ್ದೇಶವಾಗಿತ್ತು. ಮೋದಿ ಮತ್ತೆ ದೇಶದ ಪ್ರಧಾನಮಂತ್ರಿ ಆಗುವ ನಿಟ್ಟಿನಲ್ಲಿ ಕೂತು ಚರ್ಚೆ ಮಾಡಿದ್ದೇವೆ. ಈ ಭೇಟಿಯಲ್ಲಿ ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಯಾವುದೇ ಮಾತಾಡಿಲ್ಲ. ಆ ಬಗ್ಗೆ ಕೇಂದ್ರ ನಾಯಕರು ಕುಳಿತು ಚರ್ಚೆ ಮಾಡುತ್ತಾರೆ ಎಂದರು.
ಯುವ ರಾಜ್ಯಾಧ್ಯಕ್ಷರ ನೇಮಕದಿಂದ ಕಾರ್ಯಕರ್ತರ ಹುರುಪು ಹೆಚ್ಚಾಗಿದೆ. ಅದಕ್ಕಾಗಿ ವಿಜಯೇಂದ್ರ ಅವರ ಶ್ರಮ ಹಾಕುತ್ತಿರುವುದನ್ನು ನೋಡುತ್ತಿದ್ದೇನೆ. 2006-07 ರಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗು ನಾನು ಸರ್ಕಾರ ನಡೆಸಿದ್ದೆವು. ಇವತ್ತು ಸಹ ಅಂತಹ ಸರ್ಕಾರ ಬರಬೇಕು ಅನ್ನೋದು ಜನರ ಅಭಿಪ್ರಾಯ ಇದೆ ಎಂದೂ ಕುಮಾರಸ್ವಾಮಿ ಹೇಳಿದರು.