ಬೆಂಗಳೂರು: ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಭಾರತದ ದೇಶದ ಎಲ್ಲರ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಇಂದಿನ ದಿನ ಸಂವಿಧಾನ ಅಂಗೀಕರವಾಗಿದೆ. 1949,ರ ನವೆಂಬರ್ 26 ರಂದು ಸಂವಿಧಾನ ಅಂಗೀಕಾರವಾಯಿತು. ಆದ್ದರಿಂದ ಈ ದಿನವನ್ನು ಸಂವಿಧಾನ ದಿನವೆಂದು ಇಡೀ ದೇಶದಲ್ಲಿ ಆಚರಿಸಲಾಗುತ್ತದೆ ಎಂದರು.
ಡಾ.ಬಾಬು ರಾಜೇಂದ್ರ ಪ್ರಸಾದ್,
ರಚನಾ ಸಮಿತಿಯ ಅಧ್ಯಕ್ಷರಾಗಿದ್ಸ
ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರನ್ನು ಇಂದೂ, ಎಂದೂ ನೆನಪಿಸಿಕೊಳ್ಳಬೇಕು. ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ, ಸರಿಯಾದ ಕೈಗಳಲ್ಲಿ ಸಂವಿಧಾನವಿರದಿದ್ದರೆ ಸಂವಿಧಾನದ ಉದ್ದೇಶ ಸಾರ್ಥಕವಾಗುವುದಿಲ್ಲ ಎಂದು ಅಂಬೇಡ್ಕರ್ ಅವರು ಎಚ್ಚರಿಕೆಯ ಮಾತುಗಳನ್ನು ನುಡಿದಿದ್ದರು. ಸಂವಿಧಾನದ ಪರವಾಗಿರುವ ಕೈಗಳಲ್ಲಿ ಅಧಿಕಾರ ಇದ್ದರೆ ಮಾತ್ರ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಸಾಧಿಸಿದಂತಾಗುತ್ತದೆ ಎಂದು ಸಿಎಂ ಹೇಳಿದರು.
ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತಹ ಸಮಾಜ ನಿರ್ಮಾಣವಾಗಬೇಕೆಂದು ಅಂಬೇಡ್ಕರ್, ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರೂ ಕನಸು. ಆದ್ದರಿಂದ ಈ ದಿಸೆಯಲ್ಲಿ ನಮ್ಮ ಸರ್ಕಾರದ ಸಂವಿಧಾನದ ಆಶಯಗಳಂತೆ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಸರ್ಕಾರದ ಈ ಕ್ರಮದಿಂದ ಇಂದಿನ ಮಕ್ಕಳು ಮುಂದಿನ ಸತ್ಪ್ರಜೆಗಳಾಗಿ ಪ್ರಜೆಗಳಾಗಿ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ನಡೆಯಲು ಸಾಧ್ಯವಾಗುತ್ತದೆ ಎಂದರು.
ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಾ, ಭ್ರೂಣಹತ್ಯೆ ಪ್ರಕರಣಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಸಭೆ ನಡೆಸಲಾಗುವುದು ಎಂದು ಹೇಳಿದರು