ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯದ ಸಿಟ್ಟು: ಹೆಂಡತಿಯ ಏಟಿಗೆ ಗಂಡ ಮೃತ್ಯು

Prasthutha|

ಪುಣೆ: ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋದು ಗಾದೆ. ಆದರೆ ಇಲ್ಲಿ ಜಗಳ ಗಂಡನ ಮರಣದೊಂದಿಗೆ ಕೊನೆಯಾದ ಘಟನೆ ನಡೆದಿದೆ. ತನ್ನ ಹುಟ್ಟುಹಬ್ಬ ಆಚರಿಸಲು ದುಬೈಗೆ ಕರೆದೊಯ್ಯಲಿಲ್ಲ ಎಂದು ಅಸಮಾಧಾನಗೊಂಡ ಹೆಂಡತಿ ಗಂಡನಿಗೆ ಮಾರಣಾಂತಿಕ ಏಟು ಕೊಟ್ಟು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯ ವನವಾಡಿಯಲ್ಲಿರುವ ಪೋಶ್​ ರೆಸಿಡೆನ್ಶಿಯಲ್ ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

- Advertisement -

ನಿಖಿಲ್ ಖನ್ನಾ (36) ಮೃತ ವ್ಯಕ್ತಿ. ಅವರ ಮೇಲೆ ದಾಳಿ‌ಮಾಡಿ ಪ್ರಾಣಹರಣ ಮಾಡಿದ ಆರೋಪಿ ಮಹಿಳೆ 38 ವರ್ಷದ ರೇಣುಕಾ. ಶುಕ್ರವಾರ ಪುಣೆಯ ವನವಾಡಿಯಲ್ಲಿರುವ ಪೋಶ್​ ರೆಸಿಡೆನ್ಶಿಯಲ್ ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಮೂಗಿನ ಮೇಲೆ ರೇಣುಕಾ ಬಲವಾಗಿ ಗುದ್ದಿದ್ದರಿಂದ ತೀವ್ರ ರಕ್ತಸ್ರಾವಗೊಂಡ ನಿಖಿಲ್ ಮೃತಪಟ್ಟಿದ್ದಾರೆ.

ನಿಖಿಲ್ ಕಟ್ಟಡ ನಿರ್ಮಾಣದ ಉದ್ಯಮಿಯಾಗಿದ್ದರು. ನಿಖಿಲ್ ಮತ್ತು ರೇಣುಕಾ ಆರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತನ್ನ ಹುಟ್ಟುಹಬ್ಬದ ಆಚರಣೆಗೆಂದು ದುಬೈಗೆ ಕರೆದುಕೊಂಡು ಹೋಗಲಿಲ್ಲ ಎಂಬ ಕೋಪದ ಜತೆಗೆ ಕೆಲವು ಸಂಬಂಧಿಕರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವ ಆಸೆಗೆ ನಿಖಿಲ್‌ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಅಸಮಾಧಾನವೂ ರೇಣುಕಾಗೆ ಇತ್ತು. ಇದರೊಂದಿಗೆ ಮದುವೆ ವಾರ್ಷಿಕೋತ್ಸವ ಮತ್ತು ಇತರ ಸಂದರ್ಭಗಳಲ್ಲಿಯೂ ನಿರೀಕ್ಷೆಯ ದುಬಾರಿ ಉಡುಗೊರೆಗಳು ರೇಣಾಕಾಗೆ ಗಂಡನಿಂದ ದೊರಕಲಿಲ್ಲ. ಇಬ್ಬರ ನಡುವೆ ಹಲವು ಬಾರಿ ಜಗಳವೂ ನಡೆದಿದೆ. ಆದರೆ, ಶುಕ್ರವಾರದಲ್ಲಿ ನಡೆದ ಇಬ್ಬರ ಜಗಳದಲ್ಲಿ ರೇಣುಕಾ ಪತಿಯ ಮೂಗಿಗೆ ಬಲವಾಗಿ ಗುದ್ದಿದ್ದಾಳೆ. ನಿಖಿಲ್ ಹಲ್ಲುಗಳು ಮುರಿದು, ಮೂಗಿನಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ವನವಾಡಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.




Join Whatsapp