ಉತ್ತರಕಾಶಿ: ಇನ್ನೇನು ಕೆಲವೇ ಗಂಟೆಗಳಲಿ ಸುರಂಗದೊಳಗೆ ಸಿಲುಕಿ ಒದ್ದಾಡುತ್ತಿರುವ ಕಾರ್ಮಿಕರು ಹೊರಬರುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ನತದೃಷ್ಟ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮತ್ತಷ್ಟು ವಿಳಂಬವಾಗಿದೆ. ಪದೇ ಪದೆ ಡ್ರಿಲ್ಲಿಂಗ್ ಯಂತ್ರ ಕೈಕೊಡುತ್ತಿದೆ. ಶುಕ್ರವಾರ ಸಂಜೆ ವೇಳೆಗೆ ಯಂತ್ರ ದಲ್ಲಿದ್ದ ತಾಂತ್ರಿಕ ದೋಷ ಸರಿಪಡಿಸಿ ಇನ್ನೇನು ಡ್ರಿಲ್ಲಿಂಗ್ ಆರಂಭಿಸಬೇಕು ಎನ್ನುವಷ್ಟರಲ್ಲಿ ಮತ್ತೆ ಸಮಸ್ಯೆ ತಲೆದೋರಿದ ಕಾರಣ, ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.
ಕಾರ್ಮಿಕರನ್ನು ತಲುಪಲು ಇನ್ನು 12 ಮೀ. ಕೊರೆಯಬೇಕಾಗಿದ್ದು, ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸಿದರೆ ಗಂಟೆಗೆ 4-5 ಮೀ. ಕೊರೆಯುತ್ತದೆ. ಕೆಲವೇ ಗಂಟೆಗಳು ಸಾಕಾಗುತ್ತೆ ಕಾರ್ಮಿಕರನ್ನು ಹೊರಗೆ ಕರೆತರಲು. ಒಮ್ಮೆ ಪೂರ್ತಿ ಡ್ರಿಲ್ಲಿಂಗ್ ಮುಗಿದು, ಸ್ಟೀಲ್ ಪೈಪ್ ಅನ್ನು ತೂರಿಸುವ ಕೆಲಸ ಪೂರ್ಣಗೊಂಡರೆ, ಕಾರ್ಮಿಕರನ್ನು ಹೊರಕರೆತರಲು ಸಾಧ್ಯವಾಗುತ್ತದೆ ಎಂದು ಎನ್‌ಡಿಆರ್‌ಎಫ್ ಹೇಳಿದೆ.