ಡೆಹ್ರಾಡೂನ್: ಉತ್ತರಕಾಶಿಯ ಸಿಲ್ಕ್ಯಾರಾ ಎಂಬ ನಿರ್ಮಾಣ ಹಂತದ ಸುರಂಗ ಕುಸಿದು ಒಳಗೆ 11 ದಿನಗಳಿಂದ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಿರ್ಣಾಯಕ ಹಂತ ತಲುಪಿದ್ದು, ದೇಶವೇ ನಿಟ್ಟುಸಿರುಬಿಡುವಂತಾಗಿದೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಬಳಿಗೆ ರಕ್ಷಣಾ ತಂಡ ತಲುಪಿದೆ. ಸುರಂಗದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಸತತ 11ನೇ ದಿನವು ಮುಂದುವರೆದಾಗ ಈ ಫಲಿತಾಂಶಕ್ಕೆ ತಲುಪಲು ಸಾಧ್ಯವಾಗಿದೆ.
ಸುರಂಗದ ಸಿಲುಕಿರುವ 41 ಕಾರ್ಮಿಕರ ಬಳಿಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡ ಸಿಬ್ಬಂದಿ ಪ್ರವೇಶಿಸಿದ್ದಾರೆ.
ಕೇಂದ್ರ ಸರ್ಕಾರದ ಚಾರ್ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಲಭಾಗಗಳು ಕಳೆದ ನ.12ರಂದು ಕುಸಿದು, 41 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಇವರನ್ನು ಸುರಕ್ಷಿತವಾಗಿ ಹೊರತರಲು ಈಗಾಗಲೇ 45 ಮೀಟರ್ ರಂಧ್ರ ಕೊರೆಯಲಾಗಿದ್ದು, 800 ಎಂಎಂ ಪೈಪ್ ನ ಮೂಲಕ ರಕ್ಷಣಾ ತಂಡ ಸಂತ್ರಸ್ತರು ಸಿಲುಕಿರುವ ಸ್ಥಳಕ್ಕೆ ತಲುಪಿದೆ.
ಕಾರ್ಮಿಕರ ಚಿಕಿತ್ಸೆಗೆ ವಿಶೇಷ ಆಸ್ಪತ್ರೆ ಸಜ್ಜುಗೊಳಿಸಲಾಗಿದ್ದು, ಕಾರ್ಮಿಕರನ್ನು ಹೊರಗೆ ಕರೆತಂದ ತಕ್ಷಣ ಚಿಕಿತ್ಸೆ ನೀಡಲು ಚಿನ್ಯಾಲಿಸೌರ್ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿತ್ತು. ಈ ನ್ಯೂಸ್ ನೀವು ಓದುವ ಸಮಯದಲ್ಲಿ ಸಂತ್ರಸ್ತ ಕಾರ್ಮಿಕರು ಆಸ್ಪತ್ರೆ ಸೇರಿರಬಹುದಾಗಿದೆ.