►ನಾಲ್ಕು ಜನರ ಜೊತೆ ಪೊಲೀಸ್ ಡ್ರೆಸ್’ನಲ್ಲಿ ಬಂದ ಅಪರಿಚಿತ ಮಹಿಳೆ
ಬೆಳ್ತಂಗಡಿ: ನಕ್ಸಲ್ ಪೀಡಿತ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮದ ಒಂಟಿ ಮನೆಯೊಂದರ ಬಾಗಿಲನ್ನು ನಿನ್ನೆ ರಾತ್ರಿ ಐದು ಜನ ಅಪರಿಚಿತರ ತಂಡ ತಟ್ಟಿದ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ನಾಲ್ವರು ಪುರುಷರು ನೀಲಿ ಬಣ್ಣದ ಬಟ್ಟೆ ಧರಿಸಿದ್ದರೆ, ಓರ್ವ ಮಹಿಳೆ ಖಾಕಿ ಬಟ್ಟೆ ಧರಿಸಿ, ಕೈಯಲ್ಲಿ ಮಾರಕಸ್ತ್ರಗಳನ್ನು ಹಿಡಿದು ಬಂದಿದ್ದು, ಜೊತೆಗೆ ಮನೆಯ ಬಾಗಿಲನ್ನು ತೆಗೆಯದೇ ಇದ್ದಾಗ, ಹಾರೆಯಲ್ಲಿ ಬಾಗಿಲನ್ನು ತೆಗೆಯಲು ಪ್ರಯತ್ನಿಸಿದ್ದಾಗಿ ಮನೆ ನಿವಾಸಿ ಜೋಸಿ ಆಂಟನಿ ಹೇಳಿದ್ದಾರೆ.
ಇನ್ನು ರಾತ್ರಿ ಆಗಮಿಸಿದ್ದ ಅಪರಿಚಿತರು ಬಾಗಿಲು ತೆಗೆಯಲು ಪ್ರಯತ್ನಿಸುತ್ತಿದ್ದಂತೆ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ದೌಡಾಯಿಸಿದ್ದಾರೆ. ಈ ಅಪರಿಚಿತ ತಂಡ, ವೇಣೂರು ಪೊಲೀಸರು ಎಂದು ಹೇಳಿ ಪರಿಚಯ ಮಾಡಿಕೊಂಡು ಬಾಗಿಲು ತೆಗೆಯಿರಿ ಎಂದು ಹೇಳಿದ್ದರಂತೆ. ಬಂದಿದ್ದವರು ನಕ್ಸಲರು ಎಂಬ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.