ಮಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕಾತಿ, ಲೋಕಸಭಾ ಚುನಾವಣೆ ಕಡೆ ಗಮನ ಹರಿಸುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.
ಇಂದು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಆಗುವುದಾಗಿ ಮುಂಚಿತವಾಗಿಯೇ ಆಲೋಚಿಸಿ ಬಿಜೆಪಿ ಸರ್ಕಾರ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಿತ್ತು. ಆದರೆ, ಮುಂಗಾರು, ಹಿಂಗಾರು ವೈಫಲ್ಯ, ಒಂದೆರಡು ತಾಸು ವಿದ್ಯುತ್ ಇಲ್ಲದೆ ರೈತರು ಪರದಾಡುತ್ತಿದ್ದರೂ ರಾಜ್ಯ ಸರ್ಕಾರ ಹೊಣೆಗೇಡಿಯಾಗಿ ವರ್ತಿಸಿದೆ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.
ರೋಮ್ ಹೊತ್ತಿ ಉರಿಯಲು ದೊರೆ ಪಿಟೀಲು ಬಾರಿಸಿದ ಪರಿಸ್ಥಿತಿ ಇದೆಂದು ಕಿಡಿಕಾರಿದರು.ಆಡಳಿತಕ್ಕೆ ಬಂದು ಆರು ತಿಂಗಳಾದರೂ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಮೋಜಿನಲ್ಲಿ ಮುಳುಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಒಂದು ಕಡೆ ತಮ್ಮ ಸ್ವಗೃಹ ನವೀಕರಣ, ಅಲಂಕಾರಕ್ಕೆ ಕೋಟಿಗಟ್ಟಲೆ ಹಣ ಬಳಸುತ್ತಾರೆ ಎಂದು ಹೇಳಿದ್ದಾರೆ.