ಕೋಲ್ಕತ್ತಾ : ಭಾರತ ಕ್ರಿಕೆಟ್ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯ ವೇದಿಕೆಯಲ್ಲಿ ಈ ಘೋಷಣೆ ಮಾಡಿದ್ದಾರೆ.
ಗಂಗೂಲಿ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ ಸಿಎಂ ಮಮತಾ, ಸೌರವ್ ಜನಪ್ರಿಯ ವ್ಯಕ್ತಿತ್ವ. ಅವರು ಹೊಸ ಪೀಳಿಗೆಗೆ ಒಳ್ಳೆಯ ಕೆಲಸ ಮಾಡುತ್ತಾರೆ. ಬಂಗಾಳದ ಬ್ರಾಂಡ್ ಅಂಬಾಸಿಡರ್ ಹುದ್ದೆಗೆ ಅವರ ಹೆಸರನ್ನು ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಟಿಎಂಸಿ ಆಡಳಿತಕ್ಕೆ ಬರುವ ಮೊದಲು ರಾಜ್ಯವು ಯಾವುದೇ ಬ್ರಾಂಡ್ ಅಂಬಾಸಿಡರ್ ಅನ್ನು ಹೊಂದಿರಲಿಲ್ಲ. ಕಾಂಗ್ರೆಸ್ ಸಂಸದ ಹಾಗೂ ನಟ ದೇವ್ ಪಶ್ಚಿಮ ಬಂಗಾಳದ ಮೊದಲ ರಾಯಭಾರಿ.
ಸದ್ಯ ಈತನಕ ಈ ಸ್ಥಾನವನ್ನು ನಟ ಶಾರುಕ್ ಖಾನ್ ನಿರ್ವಹಿಸುತ್ತಿದ್ದಾರೆ. 2011ರಲ್ಲಿ ಅಧಿಕಾರಕ್ಕೆ ಬಂದಾಗ ಮಮತಾ ಬ್ಯಾನರ್ಜಿ ನಟ ಶಾರುಖ್ ಖಾನ್ ಅವರನ್ನು ಪಶ್ಚಿಮ ಬಂಗಾಳದ ರಾಯಭಾರಿಯಾಗಿ ಆಯ್ಕೆ ಮಾಡಿದ್ದರು. ಶಾರುಖ್ ಖಾನ್ ನಟರಾಗಿ ಪರಿಚಿತರಲ್ಲದೇ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ- ಮಾಲೀಕರಾಗಿದ್ದರು. ಇದೀಗ ಗಂಗೂಲಿ ಅವರನ್ನು ರಾಯಭಾರಿಯನ್ನಾಗಿ ಘೋಷಿಸಿದ ನಂತರ ಶಾರುಖ್ ಖಾನ್ ಅವರೂ ಸಹ ಮುಂದುವರೆಯಲಿದ್ದಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಬಂಗಾಳ ಮೂಲದ ಸೌರವ್ ಗಂಗೂಲಿ 1992 ರಿಂದ 2008ರ ವರೆಗೆ ಭಾರತಕ್ಕಾಗಿ ಆಡಿದ್ದಾರೆ. ಇವರ ಬ್ಯಾಟಿಂಗ್ ಶೈಲಿಯಿಂದಲೇ ದಾದಾ ಎಂಬ ಹೆಸರನ್ನು ಪಡೆದಿದ್ದಾರೆ. 113 ಟೆಸ್ಟ್ ಹಾಗೂ 311 ಏಕದಿನ ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ದಾಟಿದ ಆರನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಯೂ ಇವರಿಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ 35 ನೇ ಅಧ್ಯಕ್ಷರಾಗಿ 23 ಅಕ್ಟೋಬರ್ 2019 ರಿಂದ 18 ಅಕ್ಟೋಬರ್ 2022 ವರೆಗೆ ಕಾರ್ಯನಿರ್ವಹಿಸಿದ್ದಾರೆ.