ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಜೊತೆ ಚೀನಾ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದು, ಚೀನಾದ ಯುದ್ಧನೌಕೆಗಳ ಚಲನವಲನದ ಮೇಲೆ ಭಾರತೀಯ ನೌಕಾಪಡೆ ತೀವ್ರ ನಿಗಾ ಇರಿಸಿದೆ ಎಂದು ತಿಳಿದು ಬಂದಿದೆ.
ಚೀನಾದ ಪಿಎಲ್‌ಎ ನೌಕಾಪಡೆಯು ಪಾಕಿಸ್ತಾನದೊಂದಿಗೆ ಸೀ ಗಾರ್ಡಿಯನ್ ತಾಲೀಮಿಗಾಗಿ ಅತ್ಯಾಧುನಿಕ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ಸೇರಿದಂತೆ ಹಲವು ನೌಕೆಗಳನ್ನು ನಿಯೋಜಿಸಿದೆ. ಚೀನಾ ನೌಕೆಗಳು ಮಲಕ್ಕಾ ಜಲಸಂಧಿಯ ಮೂಲಕ ಹಿಂದೂ ಮಹಾಸಾಗರ ಪ್ರದೇಶವನ್ನು ಪ್ರವೇಶಿಸಿದ ಕ್ಷಣದಿಂದ ಭಾರತ ಚೀನಾದ ಚಲನವಲನದ ಮೇಲೆ ನಿಗಾ ಇಟ್ಟಿದೆ ಎಂದು ಅಧಿಕಾರಿಯಿಬ್ಬರು ಹೇಳಿದ್ದಾರೆ.
ಭಾರತದ ಸಮಗ್ರ ಕಡಲ ಪ್ರದೇಶದ ಜಾಗೃತಿಯ ಭಾಗವಾಗಿ ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ಭಾಗವಾಗಿ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಎಲ್ಲಾ ಚಲನವಲನಗಳ ಮೇಲೆ ನೌಕಾಪಡೆಯು ನಿಕಟ ನಿಗಾ ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.