ಆಗ್ರಾ: ಉತ್ತರ ಪ್ರದೇಶದ ಆಶ್ರಮದಲ್ಲಿ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ. ಆಗ್ರಾ ಜಿಲ್ಲೆಯ ಜಗನೇರ್ ಪಟ್ಟಣದಲ್ಲಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿ ಸಹೋದರಿಯರಾದ ಏಕ್ತಾ ಸಿಂಘಾಲ್(38) ಮತ್ತು ಶಿಖಾ ಸಿಂಘಾಲ್ (34) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯರು ಕೃತ್ಯಕ್ಕೆ ಮೊದಲು ಪತ್ರ ಬರೆದಿಟ್ಟಿದ್ದು, ನಮ್ಮ ಈ ಆತ್ಮಹತ್ಯೆಗೆ ನೀರಜ್, ತಾರಾ ಚಂದ್, ಗುಡ್ಡನ್ ಮತ್ತು ಪೂನಂ ಅವರೇ ಕಾರಣ ಎಂದು ತಿಳಿಸಿದ್ದರು. ಜೊತೆಗೆ ಸಹೋದರಿಯರ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಆಧಾರದ ಮೇರೆಗೆ ಜಗನೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆತ್ಮಹತ್ಯಾ ಪತ್ರದಲ್ಲಿ ಹೆಸರಿಸಲಾದ ನೀರಜ್ ಸಿಂಘಾಲ್, ತಾರಾ ಚಂದ್ ಮತ್ತು ಗುಡ್ಡನ್ ಸಹೋದರಿಯರಿಗೆ ಸಂಬಂಧಿಗಳಾಗಿದ್ದು, ಪೂನಂ ಎಂಬಾಕೆ ಆಶ್ರಮದ ಸದಸ್ಯೆಯಾಗಿದ್ದಾಳೆ.