ನಾವು ಹಾಸನಾಂಬೆ ಎದುರು ಪಕ್ಷ ಬಿಡಲ್ಲ ಎಂದು ಆಣೆ ಮಾಡಿಲ್ಲ: ಜಿಟಿ ದೇವೇಗೌಡ

Prasthutha|

ಹಾಸನ: ಹಾಸನಾಂಬೆ ಎದುರು ನಾವ್ಯಾರೂ ಪಕ್ಷ ಬಿಡಲ್ಲ ಎಂದು ಆಣೆ ಮಾಡಿಲ್ಲ. ಪಕ್ಷ ಕಟ್ಟುವ ಕುರಿತು ಪ್ರತಿಜ್ಞೆ ಮಾಡಿದ್ದೇವೆ ಅಷ್ಟೇ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ.

- Advertisement -

ಹಾಸನಾಂಬೆ ಎದುರು ಪಕ್ಷ ಬಿಡಲ್ಲ ಎಂದು ಜೆಡಿಎಸ್‌ ಶಾಸಕರು ಆಣೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಜೆಡಿಎಸ್ ನಾಯಕರು ಯಾರೂ ಪಕ್ಷ ಬಿಡುವುದಿಲ್ಲ ಎಂದು ಲಕ್ಷಾಂತರ ಜನರು ಬರುವ ತಾಯಿ ಎದುರು ಆಣೆ – ಪ್ರಮಾಣ ಸಾಧ್ಯವಾ ಎಂದು ಕೇಳಿದ ಜಿಟಿಡಿ, ನಾವೆಲ್ಲರೂ ನಮ್ಮ ಮನಸಿನಲ್ಲಿರುವುದನ್ನು ಕೇಳಿಕೊಂಡಿದ್ದೇವೆ‌. ರಾಜ್ಯದಲ್ಲಿ ಪಕ್ಷ ಬಲವರ್ಧನೆ, ಕುಮಾರಸ್ವಾಮಿಯನ್ನು ಸಿಎಂ ಮಾಡುವುದು ನಮ್ಮ ಗುರಿಯಾಗಿತ್ತು. ಆ ಕುರಿತು ನಾವು ಸಂಘಟನಾತ್ಮಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೆವು ಎಂದು ತಿಳಿಸಿದ್ದಾರೆ.

- Advertisement -

ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡಿದ ಜಿಟಿ ದೇವೇಗೌಡ, ಬಿಜೆಪಿಯಲ್ಲಿ ಅಸಮಾಧಾನಕ್ಕೆ ಅವಕಾಶ ಇಲ್ಲ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗುತ್ತಾರೆ. ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಅಂತ ಹೇಳುತ್ತಿದ್ದರು, ಆದರೆ ಹೈಕಮಾಂಡ್ ಸಿದ್ದರಾಮಯ್ಯಗೆ ಮಣೆ ಹಾಕಿತು. ಇದಾದ ಬಳಿಕ ಸಮಾಧಾನವಾಗಲಿಲ್ಲವೇ? ಬಿಜೆಪಿಯಲ್ಲೂ ಅದೇ ರೀತಿ ಅಸಮಾಧಾನ ಇದೆ, ಹೈಕಮಾಂಡ್ ಮುಂದೆ ಎಲ್ಲ ನಾಯಕರು ಸುಮ್ಮನಾಗುತ್ತಾರೆ‌ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಆಯ್ಕೆ ಬಗ್ಗೆ ಮಾತನಾಡಿದ ಅವರು, ಈಗ ಯಡಿಯೂರಪ್ಪನವರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲಾಗಿದೆ. ಮತ್ತೊಂದು ಕಡೆ ಕುಮಾರಸ್ವಾಮಿ ಜೆ ಡಿ ಎಸ್ ರಾಜ್ಯಾಧ್ಯಕ್ಷ ಆಗಿದ್ದಾರೆ. ಇಬ್ಬರು ಒಟ್ಟಾಗಿ ಹೋದರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಸುಲಭವಾಗುತ್ತದೆ. ವಿಜಯೇಂದ್ರ ಯುವ ನಾಯಕ, ಅವರಿಗೆ ಎಲ್ಲಾ ಸಮುದಾಯದ ಬೆಂಬಲ ಇದೆ. ಯಡಿಯೂರಪ್ಪ ಸಿಎಂ ಆಗಲು ವಿಜಯೇಂದ್ರ ಚಾಣಾಕ್ಷತಣವೂ ಇದೆ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಯಡಿಯೂರಪ್ಪ ಸಿಎಂ ಆಗಬೇಕು ಅಂತ 50 ಸಾವಿರ ಜನ ಸೇರಿಸಿದವನು ನಾನು, ಅವರು ಮುಖ್ಯಮಂತ್ರಿ ಆದ ಮೇಲೆ ವೀರಶೈವರು ಮಾತ್ರವಲ್ಲ, ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಒಟ್ಟಾಗಿ ಕರೆದುಕೊಂಡು ಹೋದರು. ಯಡಿಯೂರಪ್ಪ, ಕುಮಾರಸ್ವಾಮಿ ಒಟ್ಟಾಗಿ ಹೋದ ಕಾರಣಕ್ಕಾಗಿಯೇ ಅಧಿಕಾರ ಸಿಕ್ಕಿದ್ದು. ಅದರಿಂದ ಇಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.



Join Whatsapp