ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ವಿಮಾನವನ್ನು ಅನುಮತಿಸದಿರುವ ಸರ್ಕಾರದ ನಿರ್ಧಾರವನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ರಾಜ್ಯಪಾಲರ ಡೆಹ್ರಾಡೂನ್ ಪ್ರವಾಸಕ್ಕೆ ವಿಮಾನ ಒದಗಿಸಿಕೊಡದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶಿವಸೇನೆ ಸಮರ್ಥಿಸಿದೆ. ಈ ವಿಷಯವನ್ನು ರಾಜಕೀಯ ವಿವಾದವನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
“ಡೆಹ್ರಾಡೂನ್ ಪ್ರವಾಸದ ಹಿಂದಿನ ದಿನ ಭೇಟಿಯು ವೈಯಕ್ತಿಕವಾದುದರಿಂದ ವಿಮಾನ ಒದಗಿಸಿಕೊಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲರ ಕಚೇರಿಗೆ ತಿಳಿಸಲಾಗಿತ್ತು. ಆದರೂ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ವಿಮಾನ ಹತ್ತಲು ಹೋಗಿರುವುದು ದುರಹಂಕಾರ ”ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ. ಕೊಶ್ಯಾರಿ ಗುರುವಾರ ಡೆಹ್ರಾಡೂನ್ಗೆ ಪ್ರಯಾಣಿಸಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಸರ್ಕಾರಿ ವಿಮಾನ ಲಭ್ಯವಿಲ್ಲದ ಕಾರಣ ಅವರು ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಿದ್ದರು. ತಮ್ಮ ಸ್ಥಾನದ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕೆಂದು ಸಂಪಾದಕೀಯವು ರಾಜ್ಯಪಾಲರಿಗೆ ಸಲಹೆ ನೀಡಿದೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿ ಮಾರ್ಪಟ್ಟಿದ್ದಾರೆ. ಇದು ರಾಷ್ಟ್ರಕ್ಕೆ ಅವಮಾನ ಎಂದು ಆರೋಪಿಸಿರುವ ಸಂಪಾದಕೀಯವು ರಾಜ್ಯಪಾಲರು ಬಿಜೆಪಿಗೆ ಏನೇನು ಮಾಡಿದ್ದಾರೆ ಎಂಬುದನ್ನು ವಿವರಿಸಿದೆ.