ರಿಯಾಝ್ ಫರಂಗಿಪೇಟೆಗೆ ಅಸಂಬದ್ಧ ಸಂದೇಶ ರವಾನೆ: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಎಸ್ಡಿಪಿಐ ದೂರು

Prasthutha|

- Advertisement -

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರಿಗೆ ಕಳೆದ 10 ದಿನಗಳಿಂದ ವಿವಿಧ ಮೊಬೈಲ್ ಸಂಖ್ಯೆಗಳಿಂದ ಅನಗತ್ಯ ಮತ್ತು ಅಸಂಬದ್ಧ ಸಂದೇಶ, ಲಿಂಕ್ ಮತ್ತು ವಿಡಿಯೋ ವಾಟ್ಸಪ್ ಸಂದೇಶಗಳು ಬರುತ್ತಿರುವ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಪಕ್ಷದ ದ.ಕ. ಜಿಲ್ಲಾ ಮಾಧ್ಯಮ ಸಂಯೋಜಕ ಮುಹಮ್ಮದ್ ಬಶೀರ್ ತಿಳಿಸಿದ್ದಾರೆ‌

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇಂಟರ್‌ನೆಟ್ ಸಂಖ್ಯೆ, ಸ್ಥಳೀಯ ಸಂಖ್ಯೆ ಹಾಗೂ ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕ ಯಾರೋ ಅಪರಿಚಿತರು ಅನಗತ್ಯ ಮತ್ತು ಅಸಂಬದ್ಧ ಸಂದೇಶಗಳನ್ನು ರವಾನೆ ಮಾಡುತ್ತಿದ್ದಾರೆ. ಈ ಸಂಖ್ಯೆಗಳ ಪೈಕಿ ಕೆಲವೊಂದು ಮೊಬೈಲ್ ಸಂಖ್ಯೆಗೆ ಮರು ಸಂದೇಶಗಳನ್ನು ರವಾನಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ, ಬರುತ್ತಿರುವ ಸಂದೇಶಗಳಿಗೂ ರಿಯಾಝ್ ಪರಂಗಿಪೇಟೆಯವರಿಗೂ ಯಾವುದೇ ಸಂಬಂಧಗಳಿಲ್ಲ. ಈ ಎಲ್ಲಾ ವಾಟ್ಸಾಪ್ ಸಂದೇಶಗಳ ಬಗ್ಗೆ ಸಂಶಯ ಇದ್ದು, ಯಾರೋ ಕಿಡಿಗೇಡಿಗಳು ಯಾವುದೋ ಅಕ್ರಮ ಚಟುವಟಿಕೆಗಳನ್ನು ನಡೆಸುವ ದುರುದ್ದೇಶದಿಂದ ಅಥವಾ ಸೈಬರ್ ಅಪರಾಧ ಎಸಗುವ ಹುನ್ನಾರದಿಂದ ಅಥವಾ ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ, ಸಂದೇಶ ರವಾನಿಸಿರುವ ಎಲ್ಲಾ ಸಂಖ್ಯೆಗಳ ದಾಖಲೆ ಸಮೇತ ಎಸ್‌‌ಡಿಪಿಐ ಜಿಲ್ಲಾ ನಿಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮತ್ತು ಬಂಟ್ವಾಳ ನಗರ ಠಾಣಾಧಿಕಾರಿಯವರಿಗೆ ರಿಯಾಝ್ ಪರಂಗಿಪೇಟೆ ಲಿಖಿತ ದೂರನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅನಗತ್ಯ ಮತ್ತು ಅಸಂಬದ್ಧ ಸಂದೇಶಗಳನ್ನು ರವಾನಿಸುತ್ತಿರುವ ಜಾಲವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿಕೊಂಡಿರುತ್ತಾರೆ ಎಂದು ಮಹಮ್ಮದ್ ಬಶೀರ್ ಮಾಹಿತಿ ನೀಡಿದ್ದಾರೆ.

- Advertisement -

ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದ ನಿಯೋಗದಲ್ಲಿ ಎಸ್‌‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಸಮಿತಿ ಸದಸ್ಯರಾದ ಸಾಹುಲ್ ಎಸ್ ಹೆಚ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮುನೀಶ್ ಅಲಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ತಲಪಾಡಿ ಮತ್ತು ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ಉಪಸ್ಥಿತರಿದ್ದರು.



Join Whatsapp