ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನದ ಬೆಳಗಾವಿಯಲ್ಲಿ ನಡೆಯಲಿದ್ದು, ಯಾವ ಸಮಸ್ಯೆಯೂ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರಿಗೆ ಅಗತ್ಯ ವಸತಿ, ಊಟ ಹಾಗೂ ಸಾರಿಗೆ ಸೌಕರ್ಯ ಒದಗಿಸಬೇಕು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಖಾದರ್ ಮಾತನಾಡಿದರು. ಅಧಿವೇಶನದಲ್ಲಿ ಏನೇ ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಕಲಾಪಗಳನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ನಿರ್ದೇಶಿಸಿದರು.
ಮುದ್ರಣ, ಲೇಖನ ಸಾಮಗ್ರಿಗಳನ್ನು ಅಗತ್ಯತೆ ಆಧರಿಸಿ ತುಸು ಹೆಚ್ಚಿನ ಪ್ರಮಾಣದಲ್ಲೇ ಸಂಗ್ರಹಿಸಿ ಇಟ್ಟುಕೊಳ್ಳಿ. ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ತಂಗುವ ಹೋಟೆಲ್ಗಳು ಮತ್ತು ಸುವರ್ಣ ವಿಧಾನಸೌಧದಲ್ಲಿ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ತಂಡಗಳನ್ನು ನಿಯೋಜಿಸಿಕೊಳ್ಳಿ. ಸುವರ್ಣಸೌಧ ಕಾಣಿಸುವಂತಹ ಸೆಲ್ಫಿ ಸ್ಪಾಟ್ ರೂಪಿಸಬೇಕು ಎಂದು ಅವರು ಸೂಚಿಸಿದರು.
ಅಧಿವೇಶನ ಸಂದರ್ಭ ನಗರದ ಕೆಲವು ಹೋಟೆಲ್ಗಳಲ್ಲಿ ಸಾರ್ವಜನಿಕರಿಗೆ ಶೇ 10ರಷ್ಟು ಕೊಠಡಿ ಮೀಸಲಿಡಬೇಕು. ಈ ಬಗ್ಗೆ ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು’ ಎಂದು ಖಾದರ್ ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.