ಪ್ರಮುಖ ಕಾನೂನು ಅಂಗೀಕಾರಕ್ಕೆ ಸಿದ್ಧತೆ | ಬಿಜೆಪಿ ಸಂಸದರಿಗೆ ವಿಪ್ ಜಾರಿ

Prasthutha|

- Advertisement -

ಹೊಸದಿಲ್ಲಿ : ಪ್ರಮುಖ ಕಾನೂನೊಂದನ್ನು  ಅಂಗೀಕರಿಸಲಿರುವುದರಿಂದ  ಇಂದು ಸಂಸತ್ತಿನಲ್ಲಿ ಹಾಜರಾಗುವಂತೆ ಲೋಕಸಭಾ ಸದಸ್ಯರಿಗೆ ಬಿಜೆಪಿ ಸೂಚನೆ ನೀಡಿದೆ. ಪಕ್ಷದ ಮುಖ್ಯ ವಿಪ್ ರಾಕೇಶ್ ಸಿಂಗ್ ಅವರು ಮೂರು ಸಾಲಿನ ವಿಪ್ ಹೊರಡಿಸಿದ್ದಾರೆ. “ಎಲ್ಲಾ ಬಿಜೆಪಿ ಸದಸ್ಯರು ಬೆಳಿಗ್ಗೆ 10 ರಿಂದ ಸಂಸತ್ತಿನಲ್ಲಿ ಹಾಜರಾಗಿ ಸರಕಾರದ ನಿಲುವನ್ನು ಬೆಂಬಲಿಸುವಂತೆ ಕೋರುತ್ತಿದ್ದೇವೆ “ಎಂದು ವಿಪ್ ನಲ್ಲಿ ಹೇಳಲಾಗಿದೆ. ಬೆಳಿಗ್ಗೆ ಹತ್ತರಿಂದ ಸಂಜೆ ನಾಲ್ಕರವರೆಗೆ ಸಭೆ ನಡೆಯಲಿದೆ.

ಪ್ರತಿಪಕ್ಷಗಳು ಕೇಂದ್ರ ಸರಕಾರದ ಕೃಷಿ ಮತ್ತು ಆರ್ಥಿಕ ನೀತಿಗಳನ್ನು ಟೀಕಿಸುತ್ತಿರುವ ಸಮಯದಲ್ಲಿ ಬಿಜೆಪಿ ಸದಸ್ಯರಿಗೆ ಈ ವಿಪ್ ನೀಡಲಾಗಿದೆ. ಸರಕಾರವು ಶ್ರೀಮಂತರಿಗಾಗಿ ಬಜೆಟ್ ಮಂಡಿಸಿದೆ ಎಂದು ಬಜೆಟ್ ಚರ್ಚೆಯ ಸಂದರ್ಭದಲ್ಲಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಆರೋಪಿಸಿದ್ದರು. ರೈತರು ಮತ್ತು ಸೈನಿಕರ ವಿರುದ್ಧವಾದ ಬಜೆಟ್ ಎಂದು ಶಶಿ ತರೂರ್ ಆರೋಪಿಸಿದ್ದರು. ಇಂದು ಬಜೆಟ್ ಚರ್ಚೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಲಿದ್ದಾರೆ. ಸದನದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಕ್ಕು ಉಲ್ಲಂಘನೆ ನೋಟಿಸ್ ನೀಡಲು ಬಿಜೆಪಿ ನಿರ್ಧರಿಸಿದೆ.

- Advertisement -

ರೈತರ ಪರವಾಗಿ ಸದನದಲ್ಲಿ ಮೌನವನ್ನಾಚರಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಹಕ್ಕು ಉಲ್ಲಂಘನೆಯ ನೋಟೀಸ್ ನೀಡುತ್ತಿರುವುದು. ರಾಹುಲ್ ಅವರ ಕೋರಿಕೆಯ ಮೇರೆಗೆ ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಸದಸ್ಯರು ರೈತರ ಸಾವಿನ ಹಿನ್ನೆಲೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸಿದ್ದರು. ರಾಹುಲ್ ವಿರುದ್ಧ ಬಿಜೆಪಿ ಸಂಸದರಾದ ಸಂಜಯ್ ಜೈಸ್ವಾಲ್, ರಾಕೇಶ್ ಸಿಂಗ್ ಮತ್ತು ಪಿಪಿ ಚೌಧರಿ ನೋಟಿಸ್ ನೀಡಿದ್ದಾರೆ.



Join Whatsapp