ದಾವಣಗೆರೆ: ನಾನು 2018 ರ ಚುನಾವಣಾ ಪೂರ್ವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಬರ ಅಧ್ಯಯನ ಮಾಡಿದ್ದೆ. ಆದರೆ ಈ ಬಾರಿ ಪಕ್ಷದ ಕೆಲ ನಾಯಕರ ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರ ಇಟ್ಟಿದ್ದಾರೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಇದ್ದಿದ್ದು ಇದ್ದಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಹಂಗಾಗಿದೆ. ಪಕ್ಷದಲ್ಲಿರುವ ಲೋಪವನ್ನು ನೇರವಾಗಿ ಹೇಳಿದ್ದಕ್ಕೆ ಕೆಲ ನಾಯಕರು ನನ್ನನ್ನು ಹೊರಗಿಟ್ಟಿದ್ದಾರೆ. ನಮ್ಮ ಬಿಜೆಪಿಯಲ್ಲಿ ಒಂದು ತಂಡ ಇದೆ ಅದು ಈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ರು. ಆದ್ದರಿಂದ ನಮ್ಮ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದ್ದಾರೆ. ಯಡಿಯೂರಪ್ಪರನ್ನು ಕೆಳಗೆ ಇಳಿಸಿದ್ರು. ಈಶ್ವರಪ್ಪ, ಜಗದೀಶ್ ಶೆಟ್ಟರ್, ಸವದಿ ಸೇರಿದಂತೆ ಫ್ರಂಟ್ ಲೈನ್ ನಾಯಕರನ್ನು ಮುಗಿಸಿದರು. ಒಬ್ಬ ವ್ಯಕ್ತಿ ದೆಹಲಿಯಲ್ಲಿ ಕೂತು ಸಿಎಂ ಆಗಲು ಇದೆಲ್ಲ ಮಾಡಿದ್ದಾನೆ ಎಂದು ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು