ಹೊಸದೆಹಲಿ: ಗುಜರಾತಿನಲ್ಲಿ ನಡೆದಿದ್ದ ಸುದ್ದಿಯೊಂದರ ನಿರೂಪಣೆ ಮಾಡುವಾಗ ಸಮುದಾಯವೊಂದನ್ನು ಗುರಿಯಾಗಿಸಿಕೊಂಡದ್ದಕ್ಕಾಗಿ ಟೌಮ್ಸ್ ನೌ ನವ್‌ಭಾರತ್ ವಾಹಿನಿಗೆ NBDSA
ಛೀಮಾರಿ ಹಾಕಿದೆ. ಒಂದು ವಾರದೊಳಗೆ ಈ ನಿರೂಪಣಾ ವಿಡಿಯೋವನ್ನು ಅದರ ವೆಬ್ಸೈಟ್ ಮತ್ತು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಆದೇಶಿಸಿದೆ.
ಟೈಮ್ಸ್ ನೌ ನವ್‌ಭಾರತ್ ನಿರೂಪಕಿ ನವಿಕಾ ಕುಮಾರ್ 2022ರ ನವೆಂಬರ್ ತಿಂಗಳ 29ನೇ ತಾರೀಖಿನಂದು ಸುದ್ದಿ ನಿರೂಪಣೆ ಮಾಡಿದ್ದು, ಅದರಲ್ಲಿ ಮುಸ್ಲಿಮ್ ಸಮದಾಯವನ್ನು ನೆರವಾಗಿ ನಿಂದಿಸಿದ್ದರು ಎನ್ನಲಾಗಿದೆ. ಗರ್ಬಾ ನೃತ್ಯದ ವೇಳೆ ಹುಡುಗಿಯರ ಫೋಟೊ ತೆಗೆದರೆಂದು ಮುಸ್ಲಿಂ ಯುವಕರನ್ನು ಬಜರಂಗದಳದ ಸದಸ್ಯರು ಥಳಿಸಿದ ಕುರಿತು ಕಾರ್ಯಕ್ರಮ ನಡೆಸಿಕೊಡುವಾಗ ನವಿಕಾ ಕುಮಾರ್ ಇಡೀ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿ ಟೆಕ್ ಎಥಿಕ್ಸ್ ಪ್ರೊಫೆಷನಲ್ ಇಂದ್ರಜೀತ್ ಘೋರ್ಪಡೆ ದೂರು ಸಲ್ಲಿಸಿದ್ದರು.
ಸುದ್ದಿ ಮಾಧ್ಯಮ ಮಾನದಂಡಗಳನ್ನು ಉಲ್ಲಂಘಿಸಿ ಅಪರಾಧ ಘಟನೆಗೆ ಕೋಮು ಬಣ್ಣ ನೀಡಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು ಅಪರಾಧಿಗಳು ಎನ್ನುವಂತೆ ಚಿತ್ರಿಸಿದ್ದಾರೆ ಎಂದು ಅವರು ದೂರಿದ್ದರು. ಅವರಲ್ಲದೆ, ಮತೀನ್ ಮುಜಾವರ್ ಎಂಬುವರು ಕೂಡ ಈ ಕುರಿತು
ಮತ್ತೊಂದು ದೂರನ್ನು ದಾಖಲಿಸಿದ್ದರು.
ದೂರನ್ನು ಸ್ವೀಕರಿಸಿದ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA), ಟೈಮ್ಸ್ ನೌ ನವ್‌ಭಾರತ್ ಸುದ್ದಿಗಳಿಗೆ ಕೋಮು ಬಣ್ಣ ನೀಡುವುದನ್ನು ನಿಲ್ಲಿಸಬೇಕು ಎಂದು ಆದೇಶಿಸಿದೆ.
ತನ್ನ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದ ವಾಹಿನಿ, ತಾನು ಮಹಿಳಾ ಸುರಕ್ಷತೆಯ ಕುರಿತಾಗಿ ಕಾರ್ಯಕ್ರಮ ಮಾಡಿದ್ದೆ ಎಂದು ಹೇಳಿಕೊಂಡಿತ್ತು. ವಾಹಿನಿಯ ವಾದವನ್ನು ತಳ್ಳಿಹಾಕಿದ NBDSA, ಒಂದು ವಾರದೊಳಗೆ ವೆಬ್ಸೈಟ್ ಹಾಗೂ ಯೂಟ್ಯೂಬ್ ನಿಂದ ವಿವಾದಿತ ವರದಿಗಳನ್ನು ತೆಗೆದುಹಾಕಿರುವುದನ್ನು ಖಚಿತಪಡಿಸಬೇಕು ಎಂದು ಆದೇಶಿಸಿದೆ.