ವಿಜಯಪುರ: ಈ ಸರ್ಕಾರ 5 ವರ್ಷ ಉಳಿಯಲ್ಲ. ಈಗಾಗಲೇ 50 ಕಾಂಗ್ರೆಸ್ ಶಾಸಕರು ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿದ್ದು, ಪತನ ಆಗೋದು ಗ್ಯಾರಂಟಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದ ಜುಮನಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮೇಲ್ನೋಟಕ್ಕೆ ಎರಡು ಬಣವಿದ್ದರೂ, ಒಳಗೆ ನಾಲ್ಕು ಬಣ ಸೃಷ್ಟಿಯಾಗಿದೆ. 4 ಡಿಸಿಎಂ ಹುದ್ದೆ ಕೇಳುತ್ತಿದ್ದಾರೆ. ಸಿಎಂ ವಿಚಾರದಲ್ಲೂ ಗೊಂದಲ ಸೃಷ್ಟಿಯಾಗಿದೆ, ರಾಜ್ಯ ಸರ್ಕಾರವೇ ಗೊಂದಲದಲ್ಲಿದೆ. ಈ ಸರ್ಕಾರ ಖಂಡಿತವಾಗಿಯೂ 5 ವರ್ಷ ಮುಂದುವರಿಯಲ್ಲ. 50 ಶಾಸಕರು ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ. ಡಿಸಿಎಂ ಆಕಾಂಕ್ಷಿ ಸಚಿವರು, ಸಚಿವ ಸ್ಥಾನ ವಂಚಿತ ಶಾಸಕರು, ಅಸಮಾಧಾನಿತ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರೇ ಬಂದು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ನಾವು ಸರ್ಕಾರ ಕೆಡವಲ್ಲ, ತಾನಾಗಿಯೇ ಪತನವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.