ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾತಿ ನಿಂದನೆ ಆರೋಪದಲ್ಲಿ ಈ ಬಂಧನವಾಗಿದೆ.
ಈ ಹಿಂದೆ ಗೂಂಡಾ ಕಾಯ್ದೆಯಡಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಜಾತಿ ನಿಂದನೆ ಮಾಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಭೈರಪ್ಪ ಹರೀಶ್ ಎಂಬವರು ನೀಡಿದ ದೂರಿನ ಮೇರೆಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುನೀತ್ ಕೆರೆಹಳ್ಳಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಮಾಡಿದ ಆರೋಪದಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಹೀಗಾಗಿ ನ್ಯಾಯಾಲಯದ ಮುಂದೆ ಶನಿವಾರ ಪುನೀತ್ ಕೆರೆಹಳ್ಳಿಯನ್ನು ಸಂಪಿಗೆಹಳ್ಳಿ ಪೊಲೀಸರು ಹಾಜರುಪಡಿಸಲಿದ್ದಾರೆ.
ಮೊಹಮ್ಮದ್ ಇದ್ರೀಸ್ ಪಾಷಾ ಕೊಲೆ ಪ್ರಕರಣ ಸೇರಿ ವಿವಿಧ ಠಾಣೆಗಳಲ್ಲಿ 11 ಪ್ರಕರಣಗಳಿದ್ದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು. ಬಂಧನ ಪ್ರಶ್ನಿಸಿ ಪುನೀತ್ ಕೆರೆಹಳ್ಳಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದನು. ವಿಚಾರಣೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು. ಸಮಿತಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿತ್ತು.